ಕಾರವಾರ: ಗೋವಾ ಪೊಲೀಸರ ಲಾಠಿ ಏಟಿಗೆ ಕಾರವಾರದ ಯುವಕನೊಬ್ಬನ ಕೈಬೆರಳುಗಳು ಮುರಿದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಚಿತ್ತಾಕುಲದ ನಿವಾಸಿ ಕಿಶನ್ ಶೆಟ್ಟಿ(22) ಎನ್ನುವ ಯುವಕ ಗೋವಾದಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಗೆಳೆಯರ ಜತೆಯಲ್ಲಿ ಹೊಸ ವರ್ಷಾಚರಣೆಯನ್ನು ಕಾಣಕೋಣ ಬೀಚ್‌ನಲ್ಲಿ ಆಚರಿಸಿದ್ದಾರೆ.
ಬೀಚಿನಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಪೊಲೀಸ್ ಸಿಬ್ಬಂದಿಯೊಬ್ಬರು ಧಾವಿಸಿ ಬಂದು ಲಾಠಿ ಬೀಸಿದ್ದು, ಈ ಏಟಿಗೆ ಇವರ ಬೆರಳು ಮೂಳೆಗಳು ಮುರಿದು ಹೋಗಿದೆ. ಇವರಿಗೆ ಸೋಮವಾರ ಕಾರವಾರದ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ಅಮಾನವೀಯ ಹಲ್ಲೆಯನ್ನು ಖಂಡಿಸಿರುವ ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ಗೋವಾದ ಸಿಎಂ ಹಾಗೂ ಮಡಗಾಂವ್ ಎಸ್‌ಪಿ ಅವರಿಗೆ ಮನವಿ ನೀಡುವುದಾಗಿಯೂ, ಅಗತ್ಯ ಬಿದ್ದರೆ ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೂ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.