ಡೆಹ್ರಾಡೂನ್: ಕೇದಾರನಾಥ ದೇಗುಲದ ಆವರಣದಲ್ಲಿ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಪ್ರಪೋಸ್ ಮಾಡಿದ್ದು, ಇವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋ ಸುಮಾರು ಎರಡು ದಿನಗಳ ಹಳೆಯದಾಗಿದೆ ಎಂದು ಹೇಳಲಾಗಿದ್ದು, ಇದರಲ್ಲಿ ಯುವತಿ ಮತ್ತು ಆಕೆಯ ಗೆಳೆಯ ಇಬ್ಬರೂ ಹಳದಿ ಬಟ್ಟೆಯನ್ನು ಧರಿಸಿರುವುದನ್ನು ಕಾಣಬಹುದು.
ಯುವತಿ ತನ್ನ ಮಂಡಯೂರಿ ಪ್ರಿಯಕರನಿಗೆ ಉಂಗುರ ತೊಡಿಸುವ ಮೂಲಕ ಪ್ರಪೋಸ್ ಮಾಡಿದ್ದಾಳೆ. ಆ ನಂತರ ಇಬ್ಬರೂ ತಬ್ಬಿಕೊಳ್ಳುತ್ತಿರುವುದು ಕಂಡುಬರುತ್ತದೆ.
ಈ ವಿಡಿಯೋಗೆ ಸೋಷಿಯಲ್ ಮೀಡಿಯಾ ಬಳಕೆದಾರರು ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಕೆಲವರು ಪ್ರೀತಿಯ ಅಭಿವ್ಯಕ್ತಿಯನ್ನು ಬಹಳ ಸುಂದರ ಎಂದು ಬಣ್ಣಿಸುತ್ತಿದ್ದರೆ, ಇನ್ನು ಕೆಲವರು ಧಾರ್ಮಿಕ ಸ್ಥಳಗಳಲ್ಲಿ ಇಂತಹ ಕೃತ್ಯಗಳನ್ನು ಖಂಡಿಸುತ್ತಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್, ಧಾರ್ಮಿಕ ಕ್ಷೇತ್ರಕ್ಕೆ ಘನತೆ, ನಂಬಿಕೆ, ಸಂಪ್ರದಾಯಗಳಿದ್ದು, ಅದರಂತೆ ಭಕ್ತರು ನಡೆದುಕೊಳ್ಳಬೇಕು. ಸಮಿತಿಯ ಕೆಲಸ ಕೇವಲ ದೇವಸ್ಥಾನದ ನಿರ್ವಹಣೆಗೆ ಸೀಮಿತವಾಗಿದೆ ಎಂದು ಹೇಳಿದರು. ಆದರೆ, ಈ ವಿಡಿಯೋ ಕುರಿತು ಕಾನೂನು ಅಭಿಪ್ರಾಯ ಪಡೆಯುವುದಾಗಿ ಹೇಳಿದ್ದಾರೆ.