ಲಂಚ ಪಡೆಯುವಾಗ ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಲೋಕಾಯುಕ್ತ ಬಲೆಗೆ ಬಿದ್ದಿದ್ದು ಇದೇ ವೇಳೆ ಪ್ರಶಾಂತ್ ಸೇರಿದಂತೆ ಐವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.
ದಾಳಿ ಬಗ್ಗೆ ಮಾಹಿತಿ ನೀಡಿದ ಲೋಕಾಯುಕ್ತ ಡಿಐಜಿ ಸುಬ್ರಮಣ್ಯ ರಾವ್ ಅವರು, ಚೆನ್ನಗಿರಿ ಶಾಸಕ ಮಾಡಾಳ್ ವಿರೋಪಾಕ್ಷಪ್ಪ ಹಾಗೂ ಅವರ ಪುತ್ರ ಪ್ರಶಾಂತ್ ಮಾಡಾಳ್ ಮೇಲೆ ಎಫ್ಐಆರ್ ದಾಖಲಿಸಿಕೊಂಡು ದಾಳಿ ಮಾಡಲಾಗಿತ್ತು. ಪ್ರಶಾಂತ್ ಮಾಡಾಲ್ ಕೆಎಎಸ್ ಅಧಿಕಾರಿಯಾಗಿದ್ದು ಜಲಮಂಡಳಿ ಹಾಗೂ ಎಸಿಬಿ ಎರಡಲ್ಲೂ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ ನಿಯಮಿತಕ್ಕೆ (ಕೆಎಸ್ ಡಿಎಲ್) ರಾಸಾಯನಿಕ ಪೂರೈಸುವ ಟೆಂಡರ್ ನೀಡುವ ಸಲುವಾಗಿ 81 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದಾಗಿ ಕಚ್ಚಾ ಸಾಮಾಗ್ರಿ ಕಂಪನಿಯನ್ನು ನಡೆಸುತ್ತಿದ್ದ ಶ್ರೇಯಸ್ ಕಶ್ಯಪ್ ದೂರು ನೀಡಿದ್ದರು ಎಂದು ತಿಳಿಸಿದರು. ಪ್ರಶಾಂತ್ ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಅವರಿಗೆ ಲಂಚ ನೀಡಲು ಮುಂದಾಗಿದ್ದ ಇನ್ನೂ ನಾಲ್ವರನ್ನು ಬಂಧಿಸಲಾಗಿದೆ. ಇನ್ನು ದಾಳಿ ವೇಳೆ ಪ್ರಶಾಂತ್ ಕಚೇರಿಯಲ್ಲಿ ಸಿಕ್ಕಿದ್ದು 40 ಲಕ್ಷ ರೂಪಾಯಿ ಅಲ್ಲ. ಒಟ್ಟು 1.62 ಕೋಟಿ ರೂ. ಸಿಕ್ಕಿದೆ. ಸದ್ಯ ಪ್ರಶಾಂತ್ ಕಚೇರಿಯಲ್ಲಿ ಸಿಕ್ಕಿರುವ ಹಣದ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಇನ್ನೂ ಹಲವು ಸ್ಥಳಗಳಲ್ಲಿ ದಾಳಿ ಮಾಡಲಾಗುತ್ತಿದೆ ಎಂದು ತಿಳಿಸಿದರು.