ಶಬರಿಮಲೆ: ಮಾಳಿಗಪುರಂ ಕ್ಷೇತ್ರದ ಸುತ್ತುಮುತ್ತ ತೆಂಗಿನ ಕಾಯಿ ಒಡೆಯುವಿಕೆ ಮತ್ತು ಅರಶಿನ ಪುಡಿ ಸಿಂಪಡಿಸುವಿಕೆ ಶಬರಿಮಲೆ ದೇವಸ್ಥಾನದ ಸಂಪ್ರದಾಯದಲ್ಲಿ ಒಳಗೊಂಡಿಲ್ಲ ಎಂದು ಅಭಿಪ್ರಾಯಪಟ್ಟ ಕೇರಳ ಹೈಕೋರ್ಟ್‌ನ ವಿಭಾಗೀಯ ಪೀಠ, ತೆಂಗಿನ ಕಾಯಿ ಒಡೆಯುವುದಕ್ಕೆ ನಿರ್ಬಂಧಿಸಿದೆ.
ತೆಂಗಿನಕಾಯಿ ಒಡೆಯುವಿಕೆ ಹಾಗೂ ಅರಶಿನ ಪುಡಿ ಸಿಂಪಡಿಸುವಿಕೆ ಬಗ್ಗೆ ಇದೇ ನಿಲುವನ್ನು ಕ್ಷೇತ್ರದ ತಂತ್ರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ ಮಾಳಿಗಪುರ ಪರಿಸರದಲ್ಲಿ ಕೆಲವು ಭಕ್ತರು ತಾವು ಧರಿಸಿದ ಉಡುಪುಗಳನ್ನು ಅಲ್ಲೇ ಕಳಚಿ ಉಪೇಕ್ಷಿಸಿ ಹೋಗುವುದೂ ಆಚಾರ ಕ್ರಮವಲ್ಲ. ಆದ್ದರಿಂದ ಈ ವಿಷಯವನ್ನು ಧ್ವನಿವರ್ಧಕಗಳ ಮೂಲಕ ತೀರ್ಥಾಟಕರಿಗೆ ತಿಳಿಸಬೇಕೆಂದು ಹೈಕೋರ್ಟ್ ನಿರ್ದೇಶನ ನೀಡಿದೆ.
ಮಂಡಲ ಕಾಲದ ತೀರ್ಥಾಟನೆ ಆರಂಭಗೊಂಡು ಮೊದಲ 12 ದಿನಗಳಲ್ಲಿ 63.01 ಕೋಟಿ ರೂ. ಸಂಗ್ರಹವಾಗಿದೆ. ಈ ಬಾರಿ ಕಳೆದ ವರ್ಷಕ್ಕಿಂತ 15.89 ಕೋಟಿ ರೂ. ಹೆಚ್ಚಳ ಉಂಟಾಗಿದೆ. ಅಪ್ಪ ಪ್ರಸಾದ ವಿತರಣೆ ಮೂಲಕ 3.53 ಕೋಟಿ ರೂ., ಅರವಣ ಮಾರಾಟದಿಂದ 28.93 ಕೋಟಿ ರೂ. ಸಂಗ್ರಹವಾಗಿದೆ. ಇದೇ ವೇಳೆ ಭಕ್ತರ ದರ್ಶನಕ್ಕಾಗಿ ಏರ್ಪಡಿಸಿದ ವರ್ಚುವಲ್ ಕ್ಯೂ ಯಶಸ್ವಿಯಾಗಿದೆ. ಸ್ಪಾಟ್ ಬುಕ್ಕಿಂಗ್ ಮೂಲಕ ಗರಿಷ್ಠ ಸಂಖ್ಯೆಯ ಭಕ್ತರಿಗೆ ದರ್ಶನ ಸೌಕರ್ಯ ಏರ್ಪಡಿಸುವುದಾಗಿ ತಿರುವಾಂಕೂರ್ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ತಿಳಿಸಿದ್ದಾರೆ.