
ಚಲಿಸುತ್ತಿದ್ದ ಬಸ್ಸಿನಿಂದ ಹೊರಗೆ ಎಸೆಯಲ್ಪಟ್ಟು ವಿದ್ಯಾರ್ಥಿಗಳಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ತಂಗಡಿಯ ಕಳಿಯ ಗ್ರಾಮದ ಗೇರುಕಟ್ಟೆ ಬಳಿ ಇಂದು ಬೆಳಗ್ಗೆ ನಡೆದಿದೆ.
ಗಾಯಾಳುಗಳನ್ನು ನ್ಯಾಯತರ್ಪು ಗ್ರಾಮದ ಕಲೈತೊಟ್ಟು ನಿವಾಸಿ ನಾಗರಾಜ ಹಾಗೂ ರೂಪಾ ದಂಪತಿಯ ಪುತ್ರಿಯರು ಎಂದು ಗುರುತಿಸಲಾಗಿದೆ. ಈ ಪೈಕಿ ಓರ್ವೆ ಎಸೆಸೆಲ್ಸಿ ವಿದ್ಯಾರ್ಥಿನಿಯಾಗಿದ್ದು, ಇಂದು ಪರೀಕ್ಷೆಗೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಇನ್ನೊಬ್ಬಳು ಅವಳ ಸಹೋದರಿಯಾಗಿದ್ದು, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ಇವರಿಬ್ಬರು ಇಂದು ಬೆಳಗ್ಗೆ ಗೇರುಕಟ್ಟೆಯಿಂದ ಬೆಳ್ತಂಗಡಿಯ ಶಾಲೆಗೆ ತೆರಳಲು ಕೆಎಸ್ಸಾರ್ಟಿಸಿ ಬಸ್ ಹತ್ತಿದ್ದು, ರೇಷ್ಮೆ ರೋಡ್ ಎಂಬಲ್ಲಿ ತಲುಪಿದಾಗ ಏಕಾಏಕಿ ಬಸ್ಸಿನ ಬಾಗಿಲಿನ ತೆರೆಯಲ್ಪಟ್ಟಿದೆ.
ಈ ವೇಳೆ ಇವರಿಬ್ಬರು ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡಿರುವ ಅವರಿಬ್ಬರನ್ನು ಚಿಕಿತ್ಸೆಗಾಗಿ ಬೆಳ್ತಂಗಡಿ ಹಾಗೂ ಉಜಿರೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
