ಉಳ್ಳಾಲ : ಸಮುದ್ರದಲ್ಲಿ ನೀರಾಟಕ್ಕಿಳಿದ ಮೂವರು ಯುವಕರನ್ನ ರಕ್ಕಸ ಅಲೆಗಳು ಕೊಚ್ಚಿಕೊಂಡು ಹೋದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದ್ದು,ಓರ್ವ ಯುವಕ ಮೃತ ಪಟ್ಟರೆ,ಮತ್ತೋರ್ವ ಸಮುದ್ರ ಪಾಲಾಗಿದ್ದು ಇನ್ನೋರ್ವನನ್ನ ಸ್ಥಳೀಯ ಈಜುಗಾರರು ರಕ್ಷಿಸಿದ್ದಾರೆ. ಚಿಕ್ಕ ಮಂಗಳೂರು ನಿವಾಸಿ ಸಲ್ಮಾನ್(19) ಮೃತ ಪಟ್ಟ ಯುವಕನಾಗಿದ್ದು ,ಆತನ ಸಂಬಂಧಿ ಬಶೀರ್(23)ನೀರು ಪಾಲಾಗಿದ್ದು ಮತ್ತೋರ್ವ ಯುವಕ ಸೈಫ್ ಆಲಿ(27) ಆಸ್ಪತ್ರೆಯಲ್ಲಿ ಚೇತರಿಸಿದ್ದಾನೆ. ಚಿಕ್ಕ ಮಂಗಳೂರು ಮೂಲದ ಬಶೀರ್,ಸಲ್ಮಾನ್ ಮತ್ತು ಸೈಫ್ ಅಲಿ ಎಂಬವರು ಕುಟುಂಬಸ್ಥರೊಂದಿಗೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಇಂದು ಮಧ್ಯಾಹ್ನದ ವೇಳೆ ಉಳ್ಳಾಲ ಕಡಲ ಕಿನಾರೆಗೆ ವಿಹಾರಕ್ಕೆ ತೆರಳಿದ್ದರು. ಈ ವೇಳೆ ಬಶೀರ್, ಸಲ್ಮಾನ್,ಸೈಫ್ ಅಲಿ ನೀರಾಟಕ್ಕಿಳಿದಿದ್ದು ರಕ್ಕಸ ಅಲೆಗಳು ಮೂವರನ್ನ ಎಳೆದೊಯ್ದಿದೆ.ತಕ್ಷಣ ಸ್ಥಳೀಯ ಈಜುಗಾರರು ಸಲ್ಮಾನ್ ಮತ್ತು ಸೈಫ್ ಅಲಿಯನ್ನ ಎಳೆದು ದಡಕ್ಕೆ ಹಾಕಿದ್ದಾರೆ. ಸಲ್ಮಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು,ಸೈಫ್ ಅಲಿ ಪ್ರಾಣಾಪಾಯದಿಂದ ಪಾರಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಬಶೀರ್ ನೀರು ಪಾಲಾಗಿದ್ದು ಉಳ್ಳಾಲ ಪೊಲೀಸರು,ಅಗ್ನಿ ಶಾಮಕ ದಳದವರು ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಘಟನೆ ವೇಳೆ ನೀರು ಪಾಲಾಗಿರುವ ಬಶೀರನ ತುಂಬು ಗರ್ಭಿಣಿ ಪತ್ನಿ ಮತ್ತು ಇತರ ಇಬ್ಬರು ಮಹಿಳೆಯರು ಇದ್ದರಂತೆ.