December 6, 2025
WhatsApp Image 2025-10-29 at 2.54.09 PM

ಬೆಳ್ತಂಗಡಿ: ಅನುಮತಿಯಿಲ್ಲದೆ ಪೊಲೀಸರ‌ ಸೂಚನೆಯನ್ನು ನಿರ್ಲಕ್ಷಿಸಿ ಬೆಳ್ತಂಗಡಿ ಮಿನಿವಿಧಾನ ಸೌಧದ ರಸ್ತೆಯಲ್ಲಿ ಹಾಗೂ ಮಿನಿವಿಧಾನ ಸೌಧದ ಎದುರು ಸೋಮವಾರ ಅಕ್ರಮ ಗುಂಪು ಸೇರಿ ಸಾರ್ವಜನಿಕರಿಗೆ ತೊಂದರೆಯುಂಟುಮಾಡಿದ ಬಗ್ಗೆ ಸೌಜನ್ಯ ತಾಯಿ ಕುಸುಮಾವತಿ ಸೌಜನ್ಯ ಪರ ಹೋರಾಟಗಾರರಾದ ಅನಿಲ್ ಅಂತರ, ಪ್ರಸನ್ನ ರವಿ ಸೇರಿದಂತೆ 20ಮಂದಿ ಹಾಗೂ ಇತರರ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಎ.ಎಸ್.ಐ. ದುರ್ಗಾದಾಸ್ ಅವರ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

ಅ.27ರಂದು ಮಹೇಶ್ ಶೆಟ್ಟಿ ತಿಮರೋಡಿ ಸೇರಿದಂತೆ ಸೌಜನ್ಯ ಪರ ಹೋರಾಟಗಾರರ ವಿರುದ್ಧ ಪೊಲೀಸರು ಸುಳ್ಳು ಪ್ರಕರಣ‌ ದಾಖಲಿಸುತ್ತಿದ್ದಾರೆ ಎಂದು ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುವ ಕಾರ್ಯಕ್ರಮವನ್ನು ಸೌಜನ್ಯ ಪರ ಹೋರಾಟಗಾರರು ಘೋಷಿಸಿದ್ದರು. ಪೊಲೀಸ್ ಇಲಾಖೆ ಈ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿತ್ತು. ಮನವಿ ನೀಡಲು ಬಂದಿದ್ದವರನ್ನು ಪೊಲೀಸರು ತಡೆದಾಗ ಒಂದಿಷ್ಟು ಗೊಂದಲವೂ ಉಂಟಾಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ಪ್ರಕರಣ‌ದಾಖಲಿಸಿಕೊಂಡಿದ್ದಾರೆ.

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅನಿಲ್ ಕುಮಾರ್ ಅಂತರ, ಪ್ರಜ್ವಲ್ ಗೌಡ, ಪ್ರದೀಪ್ ಕುಲಾಲ್, ಶ್ರೀನಿವಾಸ ಗೌಡ, ರವೀಂದ್ರ ಶೆಟ್ಟಿ, ಪ್ರಸನ್ನ ರವಿ, ಉದಯ ಪ್ರಸಾದ್, ಕುಸುಮಾವತಿ, ವೆಂಕಪ್ಪ ಕೋಟ್ಯಾನ್, ತನುಷ್ ಶೆಟ್ಟಿ, ಮೋಹನ್ ಶೆಟ್ಟಿ, ಜಯರಾಮ ಗೌಡ, ಸಂತೋಷ್ ಶೆಟ್ಟಿ, ಪ್ರಮೋದ್ ಶೆಟ್ಟಿ, ಯೋಗೀಶ್ ಕುಲಾಲ್, ನಾರಾವಿ ವಿಜಯ, ರವೀಂದ್ರ ಶೆಟ್ಟಿ ಮುಡಿಪು, ಶಶಿಕಲಾ ಶೆಟ್ಟಿ, ಪೂಜಾಶ್ರೀ ಧರ್ಮಸ್ಥಳ, ಟಿಕ್ಕಿ ರವಿ, ಹಾಗೂ ಇತರರ ವಿರುದ್ದ ಬಿ.ಎನ್.ಎಸ್. 189(2), 190, 285, 57 ಕರ್ನಾಟಕ ಪೋಲಿಸ್ ಆಕ್ಟ್ 1963 31(o) 103(ii) ಅಡಿಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಆಗಿರುವ ಗಡಿಪಾರು ಆದೇಶದ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದು ತೀರ್ಪು ಬಾಕಿಯಿರುವ ಹಿನ್ನೆಲೆಯಲ್ಲಿ ಅನಿಲ್ ಕುಮಾರ್ ಅಂತರ ಅವರ ಮನವಿಯನ್ನು ತಿರಸ್ಕರಿಸಿ ಪ್ರತಿಭಟನೆ ನಡೆಸಲು/ಮನವಿ ಸಲ್ಲಸಲು ಅನುಮತಿ ನಿರಾಕರಿಸಲಾಗಿತ್ತು. ಅರ್ಜಿದಾರರು ತಿಳಿಸಿದ ದಿನ ಸೋಮವಾರವಾಗಿದ್ದು ಸಂತೆ ನಡೆಯುವ ಕಾರಣದಿಂದ ಸಾರ್ವಜನಿಕರು ಅತಿಹೆಚ್ಚು ಸಂಖ್ಯೆಯಲ್ಲಿ ತಾಲೂಕು ಕಚೇರಿಗೆ ಬರುವ ಕಾರಣದಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಅದನ್ನು ಮುಂದೂಡಲು ಸೂಚಿಸಲಾಗಿತ್ತು. ಇದನ್ನು ಉಲ್ಲಂಘಿಸಿದ್ದಲ್ಲಿ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿತ್ತು.

ಆದರೆ ಪೊಲೀಸ್ ಇಲಾಖೆ ನೀಡಿದ ಸ್ಪಷ್ಟ ಸೂಚನೆಯನ್ನು ನಿರ್ಲಕ್ಷಿಸಿ ಯಾವುದೇ ಪೂರ್ವಾನುಮತಿ ಪಡೆಯದೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವಂತೆ ಮತ್ತು ಸುಳ್ಳು ದೂರುಗಳ ವಿರುದ್ಧ ಸಮರ ಎಂಬಿತ್ಯಾದಿ ಪ್ರಚೋದನಾತ್ಮಕವಾಗಿ ಪ್ರಕಟಿಸಿ ಶಾಂತಿ ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ರೀತಿಯಲ್ಲಿ ಅ.27ರಂದು ಬೆಳ್ತಂಗಡಿ ತಾಲುಕು ಕಚೇರಿಗೆ ಹೋಗಿ ಬರುವ ಸಾರ್ವಜನಿಕ ರಸ್ತೆ ಹಾಗೂ ತಾಲೂಕು ಕಚೇರಿ ಎದುರು ಆರೋಪಿತರು ಅಕ್ರಮ ಕೂಟ ಸೇರಿ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದಲ್ಲದೆ ತಾಲೂಕು ಕಚೇರಿಗೆ ಹೋಗಿ ಬರುವವರಿಗೆ ಅಡ್ಡಿಯುಂಟು ಮಾಡಿರುವುದಾಗಿ ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.