ಶಿರೂರು ದುರಂತ | ಕಾರ್ಯಾಚರಣೆ ತಾತ್ಕಾಲಿಕ ಸ್ಥಗಿತ

ಅಂಕೋಲಾದ ಶಿರೂರು ಗುಡ್ಡ ಕುಸಿತ ದುರಂತ ಸಂಭವಿಸಿದ ನಂತರದ ಶೋಧ ಕಾರ್ಯಾಚರಣೆ ರವಿವಾರವೂ ನಡೆದು ಒಟ್ಟಾರೆಯಾಗಿ 13 ದಿನ ಮುಕ್ತಾಯವಾಗಿದ್ದು, ನಿರೀಕ್ಷಿತ ಯಶಸ್ಸು ದೊರೆಯದೇ ಇರುವುದರಿಂದ, ತಾತ್ಕಾಲಿಕವಾಗಿ ಕಾರ್ಯಾಚರಣೆಯನ್ನೇ ಕೈ ಬಿಟ್ಟಿದೆ.

ಈ ದುರ್ಘಟನೆಯಲ್ಲಿ ನಾಪತ್ತೆಯಾಗಿ ಈವರೆಗೂ ಪತ್ತೆಯಾಗದ ಕೇರಳ ಮೂಲದ ಅರ್ಜುನ್, ಗೋಕರ್ಣ ಗಂಗೆಕೊಳ್ಳದ ಲೋಕೇಶ್ ನಾಯ್ಕ ಮತ್ತು ಶಿರೂರಿನ ಜಗನ್ನಾಥ ನಾಯ್ಕ ಪತ್ತೆ ಕಾರ್ಯಾಚರಣೆಗೆ ಹೆಸರಾಂತ ಮುಳುಗು ತಜ್ಞ ಈಶ್ವರ್ ಮಲ್ಪೆ ಮತ್ತು ತಂಡದವರನ್ನು ಕರೆಸಲಾಗಿತ್ತು. ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ನೇತೃತ್ವದ ತಂಡ, ಗಂಗಾವಳಿ ನದಿ ನೀರಿನಲ್ಲಿ ಮೆಟಲ್ ಅಂಶ ಪತ್ತೆ ಮಾಡಿ ಗುರುತಿಸಿರುವ 4 ಸ್ಥಳಗಳಲ್ಲಿ, ಸ್ಕೂಬಾ ಡೈವಿಂಗ್ ಮಾದರಿಯಲ್ಲಿ ಈಶ್ವರ ತಂಡ ತಾವು ಕಾರ್ಯಾಚರಣೆಗಿಳಿದ ಮೊದಲ ದಿನ ಅಂದರೆ ಶನಿವಾರ, 3 ಸುತ್ತುಗಳ ಶೋಧ ಕಾರ್ಯಾಚರಣೆ ನಡೆಸಿದ್ದರು.

ಈ ವೇಳೆ ಈಶ್ವರ ಮಲ್ಪೆ ಕೆಲವೊಮ್ಮೆ ಅರ್ಧ ಗಂಟೆಗೂ ಹೆಚ್ಚು ಕಾಲ ನದಿ ನೀರಿನಲ್ಲಿ ಮುಳುಗಿ, ಶೋಧ ಕಾರ್ಯ ನಡೆಸಿ ತಮ್ಮ ಸಾಮರ್ಥ್ಯದ ಮೂಲಕ ಗಮನ ಸೆಳೆದಿದ್ದರು. ಇದೇ ವೇಳೆ ತಂಡದ ಸಹ ಸದಸ್ಯ ದೀಪು ಎನ್ನುವವರಿಗೆ ಚಿಕ್ಕ ಪುಟ್ಟ ಗಾಯಗಳಾಗಿ, ವೈದ್ಯಕೀಯ ಉಪಚಾರ ನೀಡಲಾಗಿತ್ತು. ಶನಿವಾರ ಮಳೆ ಪ್ರಮಾಣ ಈ ಹಿಂದಿಗಿಂತ ಕಡಿಮೆ ಇದ್ದರೂ, ನದಿ ನೀರಿನ ಒಳ ಪ್ರವಾಹದ ವೇಗ ಹೆಚ್ಚಾಗಿರುವುದರಿಂದ ಶೋಧ ಕಾರ್ಯಾಚರಣೆ ಸುಲಭ ಸಾಧ್ಯವಲ್ಲ ಎನ್ನುವಂತಾಗಿತ್ತು.

ಆದರೂ ಪ್ರಯತ್ನ ಬಿಡದ ಈಶ್ವರ ಮಲ್ಪೆ ತಂಡ ಅಂಕೋಲಾದ ಸ್ಥಳೀಯ ಮೀನುಗಾರರ ಮತ್ತು ವಿಪ್ಪತ್ತು ನಿರ್ವಹಣಾ ತಂಡಗಳ ಸಹಕಾರ ಪಡೆದು ಕಾರ್ಯಚರಣೆ ನಡೆಸಿದ್ದರು. ಆದರೂ ಕಾರ್ಯಾಚರಣೆಗೆ ಯಶಸ್ಸು ಸಿಗದೇ, ನದಿ ನೀರಿನಲ್ಲಿ ರವಿವಾರ ಕೊನೆಯ ಪ್ರಯತ್ನ ಎಂಬಂತೆ, ನಿಗದಿತ ಸ್ಥಳದಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿದ್ದರು.

ನದಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಗಳಿಂದಾಗಿ ಕಾರ್ಯಾಚರಣೆಗೆ ಅಡೆತಡೆಯಾಗುತ್ತದೆ ಎಂಬ ಕಾರಣಕ್ಕೆ ಹೆಸ್ಕಾಂ ಇಲಾಖೆಯವರನ್ನು ಬಳಸಿಕೊಂಡು, ತಂತಿಗಳನ್ನು ತುಂಡರಿಸಿ ತಕ್ಕಮಟ್ಟಿನ ಅನುಕೂಲ ಕಲ್ಪಿಸಲಾಗಿತ್ತು. ನಂತರ ಈಶ್ವರ್ ಮಲ್ಪೆ ಹಾಗೂ ಅವರ ಜೊತೆ ಎನ್ ಡಿ ಆರ್ ಎಫ್ ಸಿಬ್ಬಂದಿಯೋರ್ವರೂ ಸಹ ಸ್ಕೂಬಾ ಡೈವಿಂಗ್ ಮಾದರಿಯಲ್ಲಿ ಜಂಟಿ ಕಾರ್ಯಾಚರಣೆ ಗಿಳಿದಿದ್ದರು.

ಉತ್ತರ ಕನ್ನಡ ಎಸ್‌ಪಿ ನಾರಾಯಣ ಎಂ, ಖುದ್ದು ಕಾರ್ಯಾಚರಣೆ ಸ್ಥಳದಲ್ಲಿ ಹಾಜರಿದ್ದು ಕಾರ್ಯಾಚರಣೆಯ ಸಹಾಯಕ ನೇತೃತ್ವ ವಹಿಸಿರುವ ಹಿಂದೆ ಅಂಕೋಲಾದಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮಂಕಿ ಪೋಲಿಸ್ ಠಾಣೆಯ ಪಿಎಸ್ಐ ಆಗಿರುವ ಮುಷಾಯದ್ ಮತ್ತು ತಂಡಕ್ಕೆ ಅಗತ್ಯ ಮಾರ್ಗದರ್ಶನ ನೀಡುತ್ತಿದ್ದರು.

ಇನ್ನು ಜಿಲ್ಲಾಡಳಿತ ವಿಪತ್ತು ನಿರ್ವಹಣಾ ಸಭೆ ನಡೆಸಿದ್ದು, ಈ ಸಭೆಯಲ್ಲಿ ತೀರ್ಮಾನ ಮಾಡಿದಂತೆ ನಾಳೆಯೂ ಬೋಟ್ ಮೂಲಕ ಶೋಧ ಕಾರ್ಯ ಮುಂದುವರೆಸುವುದಾಗಿ ಹೇಳಿದೆ. ಇದಲ್ಲದೇ, ಗಂಗಾವಳಿ ನದಿಯಲ್ಲಿ ಬ್ರಿಡ್ಜ್ ಮೌಂಟೆಡ್ ಡೈಜಿಂಗ್ ಮೂಲಕ ಮಣ್ಣು ತೆಗೆಯಲು ಕೇರಳದ ತ್ರಿಶೂರ್‌ನಿಂದ ಆಗಮಿಸಿದ ತಜ್ಞರ ಸಲಹೆ ಪಡೆದು NDRF, SDRF ಮೂಲಕ ಮತ್ತೆ ಕಾರ್ಯಾಚರಣೆ ಮುಂದುವರೆಸುವುದಾಗಿ ಹೇಳಿದೆ. ಈ ನಡುವೆ ಕೇರಳದ ಜನಪ್ರತಿನಿಧಿಗಳು, ಕಾರ್ಯಾಚರಣೆ ಸ್ಥಗಿತಗೊಳಿಸದೆ, ಮುಂದುವರಿಸುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.

ಇನ್ನು ಶೋಧ ಕಾರ್ಯಾಚರಣೆ ಯಶಸ್ವಿಯಾಗದಿರುವುದಕ್ಕೆ ಮುಳುಗು ತಜ್ಞ ಈಶ್ವರ ಮಲ್ಪೆ ಬೇಸರ ವ್ಯಕ್ತಪಡಿಸಿದ್ದಾರೆ.

“ನಾನು ಈ ಹಿಂದೆ ಮಾಡಿದ ಬಹಳಷ್ಟು ಕಾರ್ಯಾಚಾರಣೆ ಯಶಸ್ಸು ಆಗಿದೆ. ಆದರೆ, ಇಂದಿನ ಶೋಧ ಕಾರ್ಯಾಚರಣೆ ಯಶಸ್ವಿಯಾಗದಿರುವುದರಿಂದ ದುಃಖವಾಗಿದೆ. ನಿರಂತರ ಮಳೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ನದಿ ನೀರಿನ ವೇಗ ಹೆಚ್ಚಿದೆ, ಕೆಸರುಮಯವಾಗಿದ್ದರಿಂದ ಯಶಸ್ವಿಯಾಗಿಲ್ಲ. ಗಂಗಾವಳಿ ನದಿಯಲ್ಲಿ ಶೋಧ ಕಾರ್ಯಾಚರಣೆ ಯಶಸ್ಸು ಕಾಣಲಿಲ್ಲ. ನಾನು ನದಿಗೆ ಇಳಿದಾಗ ಬಂಡೆಕಲ್ಲು, ಮಣ್ಣು ಬಿಟ್ಟು ಬೇರೆ ಕಾಣಲಿಲ್ಲ. ಇಂದು ಶೋಧ ನಡೆಸಿದ ಪಾಯಿಂಟ್​ನಲ್ಲಿ ಆಲದ ಮರ ಸಿಕ್ಕಿದೆ. ನೀರಿನ ವೇಗ ಹೆಚ್ಚಾಗಿರುವುದರಿಂದ ನದಿ ಒಳಗೆ ಇರಲು ಆಗಲಿಲ್ಲ. ಕೆಸರು ನೀರು ಇರುವ ತನಕ ಕಾರ್ಯಾಚರಣೆ ಮಾಡುವುದು ಕಷ್ಟ. ನಾನು ನದಿ ಒಳಗೆ ಎಷ್ಟೇ ಇಳಿದರೂ ನದಿ ನೀರು ಕೆಸರುಮಯವಾಗಿರುವುದರಿಂದ ಸರಿಯಾಗಿ ಏನೂ ಕಾಣುತ್ತಿಲ್ಲ” ಎಂದು ಹೇಳಿದರು.

Check Also

ಮಂಗಳೂರು : ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೆ ತೆತ್ತ ಅರ್ಚನಾ ಕಾಮತ್…!!

ಮಂಗಳೂರು : ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಮಹಿಳೆಯೊಬ್ಬರು ತನ್ನ ಪ್ರಾಣವನ್ನೇ ತೆತ್ತ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತರನ್ನು …

Leave a Reply

Your email address will not be published. Required fields are marked *

You cannot copy content of this page.