ಬೆಳ್ತಂಗಡಿ: ವಿದ್ಯಾರ್ಥಿನಿಯೋರ್ವಳು ಮನೆಯ ಶೌಚಾಲಯದೊಳಗೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಕಳಿಯಾ ಗ್ರಾಮದಲ್ಲಿ ಜನವರಿ 28ರ ಶನಿವಾರ ನಡೆದಿದೆ.
ಕಣಿಯೂರು ಗ್ರಾಮದ ಕಜೆ ಮನೆ ನಿವಾಸಿ ಅಬ್ದುಲ್ ರಜಾಕ್ ಅವರ ಪುತ್ರಿ ಆಫೀಫಾ (16) ಸಾವನ್ನಪ್ಪಿದ ಬಾಲಕಿ. ಕಳಿಯಾ ಗ್ರಾಮದ ಐಮನ್ ಆರ್ಕೆಡ್‌ನಲ್ಲಿರುವ ಹಸೈನಾರ್ ಅವರ ಮನೆಯ ಶೌಚಾಲಯದೊಳಗೆ ಬಾಲಕಿ ಮೃತಪಟ್ಟಿದ್ದಾಳೆ.
ಶನಿವಾರ ಗೇರುಕಟ್ಟೆಯಲ್ಲಿರುವ ಶಾಲೆಗೆ ತಂದೆಯೊಂದಿಗೆ ಈಕೆ ಬಂದಿದ್ದಳು. ತಂದೆಗೆ ಬೇರೆ ಕೆಲಸವಿದ್ದ ಕಾರಣ ಬಾಲಕಿಯನ್ನು ಕುಪ್ಪೆಟ್ಟಿಯಲ್ಲಿ ಬಿಟ್ಟು ಮಂಗಳೂರಿಗೆ ತೆರಳಿದ್ದರು. ಈ ವೇಳೆ ಬಾಲಕಿ ಆಫೀಫಾ ಶಾಲೆಯ ಸನಿಹದಲ್ಲಿರುವ ಐಮನ್ ಆರ್ಕೇಡ್‌ನ ಹಸೈನಾರ್ ಅವರ ಮನೆಯ ಶೌಚಾಲಯಕ್ಕೆ ತೆರಳಿದ್ದಳು. ಶೌಚಾಲಯಕ್ಕೆ ಹೋಗಿದ್ದಾಕೆ ತುಂಬಾ ಹೊತ್ತಾದರೂ ಹೊರ ಬಾರದಿದ್ದುದರಿಂದ ಮನೆ ಮಂದಿ ಕಿಟಕಿ ಮೂಲಕ ನೋಡಿದಾಗ ಬಾಲಕಿ ಒಳಗಡೆ ಬಿದ್ದುಕೊಂಡಿರುವುದು ಗೊತ್ತಾಗಿದೆ.
ಕೂಡಲೇ ಬಾಗಿಲು ಒಡೆದು ಆಕೆಯನ್ನು ಹೊರ ತೆಗೆದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಆಕೆಯನ್ನು ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ಶಾಲೆಯಿಂದ ಪ್ರಾಂಶುಪಾಲರು ತಂದೆ ಅಬ್ದುಲ್ ರಜಾಕ್ ಅವರಿಗೆ ಕರೆ ಮಾಡಿ ಮಗಳಿಗೆ ಆರೋಗ್ಯ ಸರಿಯಿಲ್ಲ ಎಂಬ ವಿಚಾರವನ್ನು ತಿಳಿಸಿದ್ದರು.
ಆಕಸ್ಮಿಕವಾಗಿ ಹೃದಯಾಘಾತ ಅಥವಾ ಇತರ ಕಾರಣಗಳಿಂದ ಮೃತಪಟ್ಟಿರುವ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ.