ಪುತ್ತೂರು: ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಕ್ಷೇತ್ರ ಪಡುಮಲೆಯಲ್ಲಿ ಗ್ರಾಮದ ದೇವಾಲಯ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ಸಾನಿಧ್ಯದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಮಧ್ಯೆ ದೇವಾಲಯಕ್ಕೆ ಮೂಲಸ್ಥಾನವಾಗಿರುವ ಮದಕದಲ್ಲಿ ದೇವಿ ಸಾನಿಧ್ಯದ ಅಭಿವೃದ್ಧಿಯೂ ಆಗುತ್ತಿದ್ದು, ಈ ಸಂದರ್ಭದಲ್ಲಿ ಕಾಣಿಸಿಕೊಂಡ ವಿಸ್ಮಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಕೌತುಕಕ್ಕೆ ಕಾರಣವಾಗಿದೆ.
ದೇವಿಯ ಸಾನಿಧ್ಯ: ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರಿಗೆ ಮೂಲವಾಗಿ ರಾಜರಾಜೇಶ್ವರಿ ದೇವಿ ಎಂಬುದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ಈ ದೇವಿಯ ಸ್ಥಾನ ದೇವಾಲಯದಿಂದ ಕೆಲವು ಕಿ.ಮೀ. ಅಂತರದಲ್ಲಿ ಪಡುಮಲೆ ಕ್ಷೇತ್ರದ ಮದಕ ಎಂಬಲ್ಲಿದೆ. ದೇವಾಲಯದ ಪಶ್ಚಿಮ ದಿಕ್ಕಿನಲ್ಲಿ ದೇವರಿಗೆ ಅಭಿಮುಖವಾಗಿ ಮದಕದಲ್ಲಿ ರಾಜರಾಜೇಶ್ವರಿ ಗುಡಿಯನ್ನು ಅಭಿವೃದ್ಧಿಪಡಿಸಲು ಸುಮಾರು 8 ಲಕ್ಷದಲ್ಲಿ ಕೆಲಸ ಕಾರ್ಯಗಳು ನಡೆಯುತ್ತಿವೆ.
ಮದಕದಲ್ಲಿ ದೇವಿ ಸಾನಿಧ್ಯದ ಗುಡಿ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದ್ದು, ಸಾನಿಧ್ಯದ ಬಳಕೆಗೆ ಪೂರಕವಾಗಿ ಬಾವಿ ತೋಡಲು ನಿರ್ಧರಿಸಿ, ಅರ್ಚಕರು ಪ್ರಾರ್ಥನೆ ಸಲ್ಲಿಸಿ ತೆಂಗಿನಕಾಯಿ ಒಡೆಯುವ ಸಂದರ್ಭದಲ್ಲಿ ತೆಂಗಿನ ನೀರು ಚಿಮ್ಮಿ ಪಕ್ಕದಲ್ಲಿ ಆರತಿ ತಟ್ಟೆಗೆ ಬಿದ್ದಾಗ ದೀಪ ನಂದುವ ಬದಲು ಪ್ರಖರ ಬೆಳಕಾಗಿ ಪ್ರಜ್ವಲಿಸಿದೆ. ದೇವಿಯ ಸಾನಿಧ್ಯ ಬೆಳಗುವ ಸೂಚಕವಾಗಿ ದೇವಿಯೇ ಅನುಗ್ರಹಿಸಿದ್ದಾರೆ ಎನ್ನುವುದು ಭಕ್ತರ ಮನಸ್ಸಿನಲ್ಲಿ ಮೂಡಿದ ಧನಾತ್ಮಕ ಅಭಿಪ್ರಾಯ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಚರ್ಚೆಗಳನ್ನು ಹುಟ್ಟು ಹಾಕಿದೆ.
ಮದಕದ ಇತಿಹಾಸ
ಮದಕ ಪ್ರದೇಶ ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ -ಚೆನ್ನಯರಿಗೆ ಸಂಬಂಧಿಸಿದ ಪುರಾಣಗಳಲ್ಲೂ ಉಲ್ಲೇಖಿಸಲ್ಪಟ್ಟಿದೆ. ಇಲ್ಲಿನ ತೀರ್ಥಕಲ್ಲಿನ ಇತಿಹಾಸ, ಮದಕ ಕೆರೆಯು ಕೋಟಿ-ಚೆನ್ನಯರ ತಾಯಿ ಸುವರ್ಣ ಕೇದಗೆ, ಮಾತೆ ರಾಜರಾಜೇಶ್ವರಿಯು ಮೊಟ್ಟೆಯ ರೂಪ ತಾಳಿ ವಿಪ್ರರಿಗೆ ಸಿಕ್ಕಿದ ಜಲಾಶ್ರಯವೆಂದು ಇತಿಹಾಸವಿದೆ. ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಾಲಯದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲೂ ಮದಕದಿಂದ ನೀರು ತಂದು ಶುದ್ದೀಕರಣ ಮಾಡಬೇಕೆಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಿದೆ. ದೇವಾಲಯಕ್ಕೆ ಸಂಬಂಧಿಸಿದ ನಾಗನ ಕಲ್ಲು ಸೇರಿದಂತೆ ದೇವರ ವಿಗ್ರಹಗಳನ್ನು ಮದಕದಲ್ಲೇ ಜಲಸ್ತಂಭನ ಮಾಡಲಾಗಿದೆ.
ದೇವಿ ಸಾನಿಧ್ಯದಲ್ಲಿ ತೆರೆಯಲಾದ ಬಾವಿಯಲ್ಲಿ 6 ಅಡಿಯಲ್ಲಿ ನೀರು ಇದೆ. ಬಾವಿಯ ಕೆಲಸವನ್ನು ಕರ ಸೇವಕರೇ ಮಾಡಿದ್ದಾರೆ. ಸುಮಾರು 4 ಅಡಿಯಲ್ಲಿ ನೀರು ಲಭಿಸಿದ್ದು, 6 ಅಡಿಯಲ್ಲಿ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ದೇವಿಯ ಸಾನಿಧ್ಯಕ್ಕೆ ಹಾಗೂ ವಿಷ್ಣುಮೂರ್ತಿ ದೇವಾಲಯದಲ್ಲಿ ಈ ಬಾವಿಯ ನೀರು ಬಳಕೆಯಾಗಲಿದೆ. ದೇವಾಲಯದ ಪುನರ್ ನಿರ್ಮಾಣ ಹಲವು ವರ್ಷಗಳ ಕನಸಾಗಿತ್ತು. ಇದೀಗ ಕೊನೆಗೂ ಅಭೂತಪೂರ್ವವಾಗಿ ಅಭಿವೃದ್ಧಿಗೊಳ್ಳುತ್ತಿದೆ. ಕೆಲಸ ಆರಂಭಿಸಿದ ಬಳಿಕದಲ್ಲಿ ಎಲ್ಲವೂ ಅನುಕೂಲಕರವಾಗಿ ಶುಭ ಸೂಚಕದಂತೆ ನಡೆಯುತ್ತಿವೆ. ಊರಿನಲ್ಲಿ ಧನಾತ್ಮಕ ಬೆಳವಣಿಗೆಗಳು ನಡೆಯುತ್ತಿವೆ. ವಿಶೇಷತೆಗಳನ್ನು ಜನರು ಖುಷಿಯಿಂದ ಹಂಚಿಕೊಳ್ಳುತ್ತಿದ್ದಾರೆ.