ಬೆಳ್ತಂಗಡಿ: ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಪರಿಚಯವಾದ ಅಪರಿಚಿತ ವ್ಯಕ್ತಿಯೋರ್ವ ನಿನ್ನ ಖಾಸಗಿ ವೀಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿದಕ್ಕೆ ಕಾಲೇಜು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಅಶೋಕ್ ನಗರ ಎಂಬಲ್ಲಿ ಘಟನೆ ನಡೆದಿದೆ. ಬೆಳ್ತಂಗಡಿ ಖಾಸಗಿ ಕಾಲೇಜಿನ ವಿದ್ಯಾರ್ಥಿ ಹರ್ಷಿತ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಘಟನೆಯ ವಿವರ:ಇನ್‌ಸ್ಟಾಗ್ರಾಂ ಮೂಲಕ ಓರ್ವ ಅಪರಿಚಿತ ವ್ಯಕ್ತಿಯು ಸಂಪರ್ಕಕ್ಕೆ ಬಂದಿದ್ದು, ಆ ಬಳಿಕ ಸ್ನೇಹ ಗಿಟ್ಟಿಸಿಕೊಂಡಿದ್ದಾನೆ. ಇನ್ ಸ್ಟಾಗ್ರಾಂ ಮೂಲಕ ಚಾಟಿಂಗ್ ಮಾಡಿಕೊಂಡಿದ್ದು, ಆ ಬಳಿಕ ಅಪರಿಚಿತ ವ್ಯಕ್ತಿ ವಿಡಿಯೋ ಕಾಲ್ ಮಾಡಿ ಮಾತಾಡಿದ್ದಾನೆ. ನಂತರ ನಿಮ್ಮ ವೈಯಕ್ತಿಕ ವಿಡಿಯೋ ನನ್ನ ಬಳಿ ಇದ್ದು, ಇದನ್ನು ಸಾರ್ವಜನಿಕವಾಗಿ ವೈರಲ್ ಮಾಡುತ್ತೇನೆ. ವೈರಲ್ ಮಾಡಬಾರದು ಎಂದಾದರೆ ತನಗೆ 11,000/- ರೂ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾನೆ.
ಆದರೆ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಾಗ ವೈಯಕ್ತಿಕ ವಿಡಿಯೋ ವನ್ನು ವೈರಲ್ ಮಾಡಿದರೆ ಮಾನ ಹೋಗಬಹುದೆಂಬ ಭಯದಿಂದ ಇಲಿ ಪಾಷಾಣವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅಸ್ವಸ್ಥ ಯುವಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.