February 28, 2026
WhatsApp Image 2026-02-28 at 8.52.46 AM

ಉಡುಪಿ : ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ನೇತೃತ್ವದಲ್ಲಿ ಉಡುಪಿಯ ಹಲವೆಡೆ ಧಿಡೀರ್ ದಾಳಿ ನಡೆಯಿತು.  ತಾಲೂಕು ಕಚೇರಿಗೆ ಭೇಟಿ ನೀಡಿದ ಅವರು  ಕೆಲವು ಅಧಿಕಾರಿಗಳ ಬೆವರಿಳಿಸಿದರು. ಜೀನ್ಸ್ ಪ್ಯಾಂಟ್ ಧರಿಸಿ ಬಂದ ಸರಕಾರಿ ನೌಕರರನನ್ನು ತರಾಟೆಗೆ ತೆಗೆದುಕೊಂಡರು. ಚಿಟ್ ಫಂಡ್ ದಾಖಲೆಗಳನ್ನು ಕಚೇರಿಗೆ ಹಿಡಿದುಕೊಂಡು ಬಂದಿದ್ದ ಸರಕಾರಿ ನೌಕರನ ಚಳಿ ಬಿಡಿಸಿದರು.  ಮಂಜೂರಾದ ಸರಕಾರಿ ಭೂಮಿಗೆ ಅಲೆದಾಡುತ್ತಿರುವ ಮಾಜಿ ಸೈನಿಕರ ಸಂಕಷ್ಟ ಕೇಳಿದ ಉಪ ಲೋಕಾಯುಕ್ತರು ತಾಂತ್ರಿಕ ದೋಷ ಸರಿಪಡಿಸಿ ಕೂಡಲೇ  ಭೂಮಿ ಮಂಜೂರು ಮಾಡುವಂತೆ ಸೂಚಿಸಿದರು.

ತನ್ನ ವೈಯಕ್ತಿಕ ಬ್ಯಾಗ್ ನಲ್ಲಿ ಸರಕಾರಿ ದಾಖಲೆ ಇಟ್ಟುಕೊಂಡಿದ್ದ ನೌಕರನನ್ನು ಅಮಾನತು ಮಾಡುವಂತೆ ಸೂಚನೆ ನೀಡಿದರು. ಬಳಿಕ ಆತನ ವಿರುದ್ಧ ಪ್ರಕರಣ ದಾಖಲಿಸುವಂತೆ ಉಡುಪಿ ನಗರ ಪೊಲೀಸರಿಗೆ ಸೂಚಿಸಿದರು.  ಸರ್ವೇ ಕಚೇರಿಯಲ್ಲಿ ಅಸಮರ್ಪಕ ದಾಖಲೆ ಕಂಡು ಉಪ ಲೋಕಾಯುಕ್ತರು ಗರಂ ಆದರು.

ಬಳಿಕ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ತಾಲೂಕು ಕಚೇರಿಯಲ್ಲಿ ತುಂಬಾ ಕೇಸುಗಳು ಪೆಂಡಿಂಗ್ ಇವೆ. ಸಬ್ ರಿಜಿಸ್ಟ್ರಾರ್  ಕಚೇರಿಯಲ್ಲಿ ಸರಕಾರಿ ದಾಖಲೆಗಳು ಖಾಸಗಿ ಬ್ಯಾಗಿನಲ್ಲಿ ಇರಿಸಿಕೊಳ್ಳಲಾಗಿದೆ.  ಮಾಜಿ ಸೈನಿಕರೊಬ್ಬರ ಭೂಮಿ ಏಳು ವರ್ಷ ಆದರೂ ಸರ್ವೇ ಮಾಡಿಲ್ಲ. ಅಟೆಂಡೆನ್ಸ್ ರಿಜಿಸ್ಟರ್ ಸಮರ್ಪಕವಾಗಿಲ್ಲ. ಸರಕಾರಿ ನೌಕರ ಚಿಟ್ ಫಂಡ್ ಮಾಡುವುದರಲ್ಲಿ ಅರ್ಥ ಇಲ್ಲ.  ಸರಕಾರಿ ನೌಕರರಿಗೆ ಡ್ರೆಸ್ ಕೋಡ್ ಇದೆ. ಆದರೆ ಆರಾಮಾಗಿ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಬಂದಿದ್ದಾರೆ . ಸಬ್ ರಿಜಿಸ್ಟ್ರಾರ್ ಕಚೇರಿಯ ಇಬ್ಬರು ಸಿಬಂದಿ ಮೇಲೆ ಪ್ರಕರಣ ದಾಖಲಿಸುತ್ತೆವೆ. ನನಗೆ ತುಂಬಾ ನೋವಾಗಿದೆ . ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೀಟಿಂಗ್ ಮಾಡಿದಾಗ ಇಲ್ಲಿನ  ಜನ ಬಹಳ ಬುದ್ಧಿವಂತರು ಎಂದಿದ್ದಾರೆ. ಇಲ್ಲಿ ಸಾಕ್ಷರರು, ಜಾಸ್ತಿ ಎಂದು ಹೇಳುತ್ತಾರೆ. ಆದರೆ ವಿದ್ಯಾವಂತ ಮೋಸಗಾರರಿಂದ ದೇಶ ಹಾಳಾಗುತ್ತಿದೆ ಎಂಬ ಮಾತಿಗೆ ಇಲ್ಲಿ ಉದಾಹರಣೆ ಕಾಣುತ್ತಿದೆ.

ಏನೇ ಕೇಳಿದರೂ ಬಾಯಿ ಮುಚ್ಚಿ ಕೂತಿರುತ್ತಾರೆ. ಮೌನವೇ ಉತ್ತರ ಎಂಬಂತೆ ಇರುತ್ತಾರೆ.  ಸರಕಾರಿ ಕಚೇರಿಯಲ್ಲಿ ಭ್ರಷ್ಟಾಚಾರ ನಡೆಸಲು ಪರವಾನಿಗೆ ಸಿಕ್ಕಂತೆ ಆಗಿದೆಯೆ ಎಂಬ ಪರಿಸ್ಥಿತಿ ಇದೆ. ನಮಗೇ ಯಾಮಾರಿಸುತ್ತಾರೆ. ಎಲ್ಲಾ ವಿಚಾರಗಳ ಬಗ್ಗೆ ಸುಮೋಟೋ ಪ್ರಕರಣ ದಾಖಲಿಸುತ್ತೇವೆ ಎಂದರು.

About The Author

Leave a Reply

Your email address will not be published. Required fields are marked *

You cannot copy content of this page.