

ಉಡುಪಿ: ಈ ಸಲದ ಮಳೆಗಾಲದ ನಾಲ್ಕು ತಿಂಗಳ ಅವಧಿಯಲ್ಲಿ (ಜೂನ್-ಸೆಪ್ಟೆಂಬರ್) ಜಿಲ್ಲೆಯಲ್ಲಿ ಶೇ.22ರಷ್ಟು ಮಳೆಯ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮುಂದೆ ಕುಡಿಯುವ ನೀರಿಗೆ ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಜನರಿಗೆ ನೀರಿನ ಮಿತ ಬಳಕೆಗೆ ಮನವಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ. ಜನವರಿಯಿಂದ ಸೆಪ್ಟೆಂಬರ್‌ವರೆಗೆ ಜಿಲ್ಲೆಯಲ್ಲಿ ಶೇ.24ರಷ್ಟು ಮಳೆಯ ಕೊರತೆ ಕಂಡಬಂದಿದೆ. ಅಲ್ಲದೇ ಹಿಂಗಾರು ಮಳೆ ಸುರಿಯುವ ಅಕ್ಟೋಬರ್ ತಿಂಗಳಲ್ಲೂ ಇದುವರೆಗೆ ಶೇ.37ರಷ್ಟು ಕೊರತೆ ಕಂಡುಬಂದಿದೆ. ಹೀಗಾಗಿ ಕುಡಿಯುವ ನೀರಿಗೆ ಕೊರತೆಯಾಗುವುದನ್ನು ತಪ್ಪಿಸಲು ಈಗಲೇ ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಜಿಲ್ಲೆಯಲ್ಲಿರುವ ಕಿಂಡಿ ಅಣೆಕಟ್ಟಿನ ನೀರು ಹೊರಹರಿದು ಹೋಗದಂತೆ ಡಿಸೆಂಬರ್ ತಿಂಗಳ ಬದಲು ಈಗಲೇ ಹಲಗೆ ಹಾಕಿ ನೀರಿನ ಹರಿವು ತಡೆಯಲು ಸಣ್ಣ ನೀರಾವರಿ ಇಲಾಖೆಗೆ ಸೂಚನೆ ನೀಡಲಾಗಿದೆ. ಈ ತಿಂಗಳಲ್ಲಿ ಮಳೆ ಬರುವ ಮುನ್ಸೂಚನೆ ಇದ್ದಿದ್ದರಿಂದ ಇದುವರೆಗೆ ಹಲಗೆ ಹಾಕಿಲ್ಲ. ಆದರೆ ಜಿಲ್ಲೆಯಲ್ಲಿ ಈ ತಿಂಗಳು ನಿರೀಕ್ಷೆ ಮಳೆಯಾಗದ ಕಾರಣ ಶೀಘ್ರವೇ ಹಲಗೆ ಹಾಕುವಂತೆ, ಹಲಗೆ ಎತ್ತರ ಹೆಚ್ಚಿಸಲು ಸೂಚನೆ ನೀಡಲಾಗುವುದು ಎಂದರು. ಉಡುಪಿಗೆ ಕುಡಿಯುವ ನೀರು ಪೂರೈಸುವ ಬಜೆ ಅಣೆಕಟ್ಟಿನಲ್ಲಿ ಹೂಳು ತುಂಬಿದ್ದು, ಅದನ್ನು ತೆಗೆಯಲು ಒಂದೆರಡು ದಿನಗಳಲ್ಲಿ ಟೆಂಡರ್ ಕರೆಯಲಾಗುವುದು. ಈಗ ತುಂಬ ನೀರಿರುವುದರಿಂದ ನವೆಂಬರ್ ತಿಂಗಳ ಕೊನೆಯ ವೇಳೆಗೆ ಹೂಳೆತ್ತಲು ಕ್ರಮ ಕೈಗೊಳ್ಳಲಾಗುವುದು ಎಂದರು. ವಾರಾಹಿಯಿಂದ ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರು ತರುವ ಕಾಮಗಾರಿಗೆ ವೇಗ ನೀಡಲಾಗುವುದು, ನೀರಾವರಿ ನಿಗಮದ ಆಡಳಿತ ನಿರ್ದೇಶಕರು ಕೆಲ ದಿನಗಳ ಹಿಂದೆ ಈ ಕಾಮಗಾರಿಯ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ್ದು ಮುಂದಿನ ಫೆಬ್ರವರಿ ತಿಂಗಳೊಳಗೆ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದ್ದು, ಅವರು ಒಪ್ಪಿಕೊಂಡಿದ್ದಾರೆ ಎಂದರು.