ಮಣಿಪಾಲ: ಉಡುಪಿ ನಗರದ ಮಣಿಪಾಲದ ಬಳಿಯ ಪೆರಂಪಳ್ಳಿಯ ಮನೆಯೊಂದರ ಅಂಗಳದಲ್ಲಿ ಶುಕ್ರವಾರ ರಾತ್ರಿ ಚಿರತೆ ಸಂಚಾರ ಕಂಡು ಬಂದಿದ್ದು, ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳೀಯ ರಲ್ಲಿ ಆತಂಕ ಮನೆ ಮಾಡಿದೆ.
ಮನೆಯ ಹೊರಭಾಗದಲ್ಲಿದ್ದ ನಾಯಿ ಬೊಗಳುತ್ತಿದ್ದನ್ನು ಗಮನಿಸಿದ ಮನೆ ಮಂದಿ ಬಾಗಿಲು ತೆರೆದಿರಲಿಲ್ಲ. ಕ್ರಮೇಣ ನಾಯಿ ಶಬ್ದ ಕೂಡಾ ಕೇಳಿ ಬಂದಿಲ್ಲ. ಬೆಳಿಗ್ಗೆ ಮನೆ ಮಂದಿ ಸಿಸಿಟಿವಿ ದೃಶ್ಯ ಗಳನ್ನು ಗಮನಿಸಿದಾಗ ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಸಿಕ್ಕಿದೆ.
ರಾತ್ರಿ ಸುಮಾರು 11.25 ರ ಸಮಯಕ್ಕೆ ಚಿರತೆ ಮನೆಯಂಗಳಕ್ಕೆ ಬಂದಿದ್ದು, ಚಿರತೆಯನ್ನು ಗಮನಿಸಿದ ನಾಯಿ ಬೊಬ್ಬೆ ಇಟ್ಟಿದೆ, ನಾಯಿಯನ್ನು ಅಟ್ಟಿಸಿಕೊಂಡು ಹೋದ ಚಿರತೆಯ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳೆದ ಕೆಲವು ದಿನಗಳಿಂದ ಮಣಿಪಾಲ, ಪೆರಂಪಳ್ಳಿ ಭಾಗದಲ್ಲಿ ಚಿರತೆಯ ಇರುವಿಕೆಯ ಕುರಿತು ಸ್ಥಳೀಯರಿಗೆ ಸಂಶಯ ಇದ್ದು, ಇದೀಗ ಚಿರತೆ ಕಂಡು ಬಂದ ಬಳಿಕ ಜನರು ಭಯಭೀತರಾಗಿದ್ದಾರೆ.