ಮಾಣಿ: ಚುನಾವಣಾ ಕರ್ತವ್ಯ ಮುಗಿಸಿ ಮಡಿಕೇರಿಯಿಂದ ಪುತ್ತೂರಿಗೆ ಹಿಂದಿರುಗುತ್ತಿದ್ದಾಗ ಪಾಸ್ ಆಗುತ್ತಿದ್ದ ವೇಳೆ ಕೆಎಸ್ಸಾರ್ಟಿಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಶನಿವಾರ ತಡರಾತ್ರಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಕ್ರಂಪಾಡಿ ಬಳಿ ನಡೆದಿದೆ.
ಮೃತ ಆಟೋ ಚಾಲಕನನ್ನು ಜೈಸನ್ (30)ಎಂದು ಗುರುತಿಸಲಾಗಿದೆ. ಪುತ್ತೂರಿಗೆ ಬರುತ್ತಿದ್ದ ಬಸ್ ಮತ್ತು ವಿರುದ್ಧ ದಿಕ್ಕಿನಿಂದ ಚಲಿಸುತ್ತಿದ್ದ ರಿಕ್ಷಾ ನಡುವೆ ನಸುಕಿನ ಜಾವ ಸುಮಾರು 2 ಗಂಟೆಗೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಜೈಸನ್ ರಿಕ್ಷಾದ ಒಳಗೆ ಸಿಲುಕಿ ಹಾಕಿಕೊಂಡಿದ್ದರು. ಬಳಿಕ ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಜೈಸನ್ ಅವರನ್ನು ಹೊರತೆಗೆದಿದ್ದಾರೆ. ಈ ವೇಳೆಗಾಗಲೇ ಜೈಸನ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.