December 6, 2025
2-768x432

ಮಂಗಳೂರು : MRPL ಕಂಪೌಂಡ್‌ಗೆ ಹೊಂದಿಕೊಂಡಿರುವ ಕುತ್ತೆತ್ತೂರಿನ ಕಾಯರ್ ಕಟ್ಟೆಯಲ್ಲಿ ಪಿಲಿಚಾಮುಂಡಿ ದೈವ ನೆಲೆಯಾಗಿದೆ. ನೂರಾರು ವರ್ಷಗಳ ಹಿಂದಿನಿಂದ ಇಲ್ಲಿ ಪಿಲಿ ಚಾಮುಂಡಿಯ ಆರಾಧನೆ ನಡೆಯುತ್ತಿದೆ. ಆದರೆ, 18 ವರ್ಷಗಳಿಂದ ಗಡು ಪ್ರದೇಶದಲ್ಲಿ ನೇಮ ನಡೆಯುವುದೇ ನಿಂತಿತ್ತು. ಅದ್ಯಾವಾಗ ನೇಮ ನಡೆಯುವುದು ನಿಂತಿತ್ತೋ ಅಲ್ಲಿಂದ ಸಂಕಷ್ಟ ಶುರುವಾಗಿತ್ತು. ಇಲ್ಲಿನ ಗ್ರಾಮಸ್ಥರು ಹಾಗೂ MRPL ಕಂಪೆನಿಗೆ ಸಮಸ್ಯೆಗಳು ಆರಂಭವಾದವು.

ಇದಕ್ಕೆಲ್ಲ ದೈವದ ಕೋಪ ಕಾರಣ ಎನ್ನಲಾಗಿತ್ತು. ಪ್ರಶ್ನಾಚಿಂತನೆ ನಡೆದು ಮತ್ತೆ ದೈವಾರಾಧನೆ ಆರಂಭಗೊಂಡು ನೇಮವೂ ನಡೆದಿತ್ತು. ಆದ್ರೆ, ಇದೀಗ MSEZ ವಶದಲ್ಲಿರುವ ಜಾಗದಲ್ಲಿ ಕಾಂತೇರಿ ಜುಮಾದಿ ದೈವದ ಆರಾಧನೆಗೆ ಅಧಿಕಾರಿಗಳು ತಡೆ ಒಡ್ಡಿದ್ದಾರೆ.
ಸಂಕ್ರಮಣ ಪೂಜೆಗೆ ಅಡ್ಡಿ :
2006 ರಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆ ವೇಳೆ ಬಜಪೆ ಸಮೀಪ ಮೂರು ಸಾವಿರ ಎಕ್ರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಈ ವೇಳೆ ಅನೇಕ ದೇವಸ್ಥಾನ , ದೈವಸ್ಥಾನ , ಚರ್ಚ್, ಮಸೀದಿಗಳು ನೆಲಸಮವಾಗಿ ಹೋಗಿತ್ತು. ಆದ್ರೆ ಹಲವು ಹೋರಾಟದ ಫಲವಾಗಿ ನೆಲ್ಲಿದಡಿ ಗುತ್ತಿಗೆ ಸೇರಿದ ಕಾಂತೇರಿ ಜುಮಾದಿ ದೈವಸ್ಥಾನ ಉಳಿದುಕೊಂಡಿತ್ತು. ಸ್ಮಾರಕದ ರೀತಿಯಲ್ಲಿ ಉಳಿದುಕೊಂಡ ದೈವಸ್ಥಾನದಲ್ಲಿ ವರ್ಷಕ್ಕೊಂದು ಬಾರಿ ಉತ್ಸವ ಹಾಗೂ ಪ್ರತಿ ಸಂಕ್ರಮಣಕ್ಕೆ ದೈವಕ್ಕೆ ವಿಶೇಷ ಸೇವೆಗೆ ಅವಕಾಶ ನೀಡಲಾಗಿತ್ತು.

800 ವರ್ಷಗಳ ಇತಿಹಾಸ ಇರುವ ಕಾರ್ಣಿಕದ ದೈವವಾಗಿರುವ ಕಾರಣ ಊರವರ ಸಹಕಾರದಿಂದ ಇಲ್ಲಿ ವರ್ಷಾವಧಿ ಉತ್ಸವ ನಡೆಯುತ್ತಿತ್ತು. ಆದ್ರೆ ತಿಂಗಳ ಪೂಜೆಗೆ ಕೇವಲ ಗುತ್ತಿನ ಮನೆಯ ಪ್ರಮುಖರಿಗಷ್ಟೇ ಹೋಗಲು ಅವಕಾಶ ನೀಡಲಾಗಿತ್ತು. ಆದ್ರೆ, ಇದೀಗ ಸಂಕ್ರಮಣ ಪೂಜೆ ನಡೆಸಲು MSEZ ಅಧಿಕಾರಿಗಳು ಅಡ್ಡಿ ಪಡಿಸಿದ್ದಾರೆ. ಇದು ಸ್ಥಳೀಯರು ಹಾಗೂ ದೈವಾರಾಧಕರ ಆಕ್ರೋಶಕ್ಕೆ ಕಾರಣವಾಗಿದ್ದು, ಕಾರ್ಣಿಕದ ದೈವಕ್ಕೆ ಆರಾಧನೆಗೆ ಅಡ್ಡಿ ಪಡಿಸದಂತೆ ವಿನಂತಿಸಿಕೊಂಡಿದ್ದಾರೆ. ಆದ್ರೆ, ಅಧಿಕಾರಿಗಳು ಮಾತ್ರ ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಹೋರಾಟದ ಫಲವಾಗಿ ಉಳಿದಿದ್ದ ಕಾಂತೇರಿ ಜುಮಾದಿ ದೈವಸ್ಥಾನದಲ್ಲಿ ಆರಾಧನೆ ನಿಲ್ಲಿಸಿದ್ರೆ ಮುಂದೇನು ಕಾಡಲಿದೆಯೋ ಎಂಬ ಭಯ ಊರಿನವರಲ್ಲಿದೆ. ಹೀಗಾಗಿ ತುಳನಾಡ ನಂಬಿಕೆಯ ವಿಚಾರದಲ್ಲಿ ಅಧಿಕಾರಿಗಳ ಈ ದಬ್ಬಾಳಿಕೆ ವಿರುದ್ಧ ಉಗ್ರ ಹೋರಾಟಕ್ಕೆ ಜನರು ಮುಂದಾಗಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.