ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಸ್ಥಾನ ಪಡೆದುಕೊಂಡು ಬಳಿಕದ ದಿನಗಳಲ್ಲಿ ಅಭಿಮಾನಿಗಳು ಸ್ಥಾಪಿಸಿದ ಪುತ್ತಿಲ ಪರಿವಾರದ ಮುಖ್ಯಸ್ಥರೂ ಆಗಿರುವ ಅರುಣ್ ಕುಮಾರ್ ಪುತ್ತಿಲ ಅವರು ಮತ್ತೆ ಬಿಜೆಪಿಗೆ ಬರುವುದು ಖಚಿತ ಎಂಬ ಸುದ್ದಿ ಜನಜನಿತವಾಗಿದೆ.
ಪ್ರಮುಖ ಹುದ್ದೆ ನೀಡುವ ಕುರಿತು ಪ್ರಮುಖ ಬಿಜೆಪಿ ನಾಯಕರ ಜೊತೆಯೂ ಮಾತುಕತೆ ನಡೆದಿದೆ. ಅರುಣ್ ಪುತ್ತಿಲ ಸೇರ್ಪಡೆಗೆ ಪುತ್ತೂರಿನಲ್ಲಿ ಕೆಲ ಬಿಜೆಪಿ ಮುಖಂಡರ ವಿರೋಧದ ನಡುವೆಯೂ ಹೈಕಮಾಂಡ್ ಮುಂದಿನ ಲೋಕಸಭಾ ಚುನಾವಣೆ ಹಾಗೂ ಪಕ್ಷದ ಬಲವರ್ಧನೆ ನಿಟ್ಟಿನಲ್ಲಿ ಅ ಪುತ್ತಿಲ ಅವರನ್ನು ಸೇರಿಸಲು ಮುಂದಾಗಿದೆ.
ಬೆಂಗಳೂರಿನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗುತ್ತದೆ ಎಂದು ತಿಳಿದು ಬಂದಿದೆ.ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿಯೇ ಬಿಜೆಪಿಗೆ ಸೇರ್ಪಡೆಗೊಳಿಸುವ ಎಲ್ಲಾ ಸಾಧ್ಯತೆಗಳೂ ಇದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರನ್ನು ಮತ್ತೆ ಪಕ್ಷಕ್ಕೆ ಕರೆತರುವ ಪ್ರಯತ್ನದಲ್ಲಿ ರಾಜ್ಯ ಬಿಜೆಪಿ ನಾಯಕರು ಯಶಸ್ವಿಯಾಗಿರುವ ಬೆನ್ನಲ್ಲೇ ಒಂದೆರಡು ದಿನಗಳಲ್ಲಿ ಅರುಣ್ ಕುಮಾರ್ ಪುತ್ತಿಲ ಅವರನ್ನೂ ಮತ್ತೆ ಬಿಜೆಪಿಗೆ ಸೇರಿಸುವುದು ಖಚಿತವಾಗಿದೆ. ಪಕ್ಷಕ್ಕೆ ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಹೈಕಮಾಂಡ್ ಉತ್ಸುಕತೆ ಹೊಂದಿದ್ದು, ಪುತ್ತಿಲ ಪರಿವಾರ ಸ್ಥಾಪನೆ ಹಾಗೂ ಆ ಬಳಿಕ ನಡೆದ ಉಪಚುನಾವಣೆಯಲ್ಲಿ ಸ್ಪರ್ಧೆ ,ಗ್ರಾಮೀಣ ಭಾಗದಲ್ಲಿ ಧಾರ್ಮಿಕ ಕಾರ್ಯಗಳ ಮೂಲಕ ಪರಿವಾರವನ್ನು ಇನ್ನಷ್ಟು ಗಟ್ಟಿಗಳಿಸುವ ಕಾರ್ಯವನ್ನು ಹೈ ಕಮಾಂಡ್ ಗಮನಿಸಿದೆ ಎಂದು ತಿಳಿದು ಬಂದಿದೆ.