
ಅಪಘಾತ ಪ್ರಕರಣವೊಂದರ ಆರೋಪಿಯನ್ನು ಬಂಧಿಸಲು ಪೊಲೀಸರು ತೆರಳಿದ ವೇಳೆ ಉಂಟಾದ ಗೊಂದಲಕ್ಕೆ ಸಂಬಂಧಿಸಿ ಬ್ರಹ್ಮಾವರದ ಅಕ್ಷತಾ ಪೂಜಾರಿ ನೀಡಿದ ದೂರು ಹಾಗೂ ಪೊಲೀಸರು ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ನೀಡಿದ ದೂರುಗಳೆರಡನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸುವಂತೆ ಡಿಜಿ ಕಚೇರಿಗೆ ಕಳುಹಿಸಿದ ಪ್ರಸ್ತಾಪವನ್ನು ಅಂಗೀಕರಿಸಲಾಗಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆಗಾಗಿ ಸಿಐಡಿಗೆ ವರ್ಗಾಯಿಸಲಾಗಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರು ಹಾಗೂ ಪ್ರತಿದೂರುಗಳೆರಡರ ತನಿಖೆಯನ್ನು ಸಿಐಡಿ ನಡೆಸಲಿದೆ.
ಡಿ.18ರಂದು ಬ್ರಹ್ಮಾವರ ಠಾಣೆ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಕಾರರ ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನಕಾರರು ಠಾಣೆಯ ಮುಂದೆ ಅನುಮತಿ ಇಲ್ಲದೇ ಧ್ವನಿವರ್ದಕ ಬಳಸಿದ್ದಕ್ಕಾಗಿ 200ರೂ ದಂಡ ವಿಧಿಸಬಹುದಾದ ಪ್ರಕರಣ ದಾಖಲಿಸಲಾಗಿದೆ.
ಪ್ರತಿಭಟನೆಗೆ ಮುನ್ನ ಪೊಲೀಸರು ಆಯೋಜಕರಿಗೆ ನೋಟೀಸು ನೀಡಿದ್ದರೂ ಅನುಮತಿ ಇಲ್ಲದೇ ಅದನ್ನು ಬಳಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಹರಿರಾಂ ಶಂಕರ್ ತಿಳಿಸಿದ್ದಾರೆ.
