ಮಂಗಳೂರು: ಮಂಗಳೂರು ದಸರಾ ಮೆರವಣಿಗೆ ಕಳೆದ ದಿನ(ಅ.24) ಅದ್ದೂರಿಯಾಗಿ ಆರಂಭಗೊಂಡು, ಇಂದು ಮುಂಜಾನೆ ಸಂಪನ್ನಗೊಂಡಿದೆ. ದಸರಾ ಮಹೋತ್ಸವ ನಡೆಯುವ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಸಂಜೆ ಸುಮಾರು 4 ಗಂಟೆಗೆ ದಸರಾ ಮೆರವಣಿಗೆ ಆರಂಭಗೊಂಡಿತು.
ವಿಘ್ನವಿನಾಶಕ ಗಣೇಶ, ಆದಿಶಕ್ತಿ, ನವದುರ್ಗೆಯರು ಹಾಗೂ ಶಾರದಾ ಮಾತೆಯ ಬೃಹತ್ ಶೋಭಾಯಾತ್ರೆ ಕೇಂದ್ರದ ಮಾಜಿ ಸಚಿವ ದಸರಾ ಮಹೋತ್ಸವದ ರೂವಾರಿ ಬಿ.ಜನಾರ್ದನ ಪೂಜಾರಿ ನೇತೃತ್ವದಲ್ಲಿ ನಡೆಯಿತು. ಒಂದು ಸಾವಿರ ಆಕರ್ಷಕ ಕೇರಳಾ ಕೊಡೆಗಳು, ನೂರಕ್ಕೂ ಅಧಿಕ ಬ್ಯಾಂಡ್ ಸೆಟ್‌ಗಳು, ಸುಮಾರು 40 ಜಾನಪದ ಕುಣಿತಗಳ ತಂಡ, ಕೇರಳಾ ಚೆಂಡೆವಾದನ, ಕೊಂಬು ಕಹಳೆ, ದೇಶದ ಇತಿಹಾಸವನ್ನು ಬಿಂಬಿಸುವ ಸುಮಾರು 60ಕ್ಕೂ ಹೆಚ್ಚು ಸ್ಥಬ್ದ ಚಿತ್ರಗಳು ಈ ದಸರಾ ಮೆವರಣಿಗೆಗೆ ಮೆರಗು ನೀಡಿತು. ನಗರದ ಸುಮಾರು 7 ಕಿಲೋ ಮೀಟರ್ ದಾರಿಯಲ್ಲಿ ಸಾಗುವ ಈ ಮೆರವಣಿಗೆ ಇಂದು ಮುಂಜಾನೆ ನವ ದುರ್ಗೆಯರನ್ನು ಜಲಸ್ಥಂಬನ ಮಾಡುವ ಮುಖೇನ ಸಮಾಪನಗೊಂಡಿತ್ತು. ಕುದ್ರೋಳಿ ಕ್ಷೇತ್ರ ಪುಷ್ಕರಣಿಯಲ್ಲಿ ಗಣಪತಿ,ಆದಿಶಕ್ತಿ,ಶಾರದೆ ಹಾಗೂ ನವದುರ್ಗೆಯರ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಆಕರ್ಷಕ ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದೆ. ದೇಶ ವಿದೇಶಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ದಸರಾ ಮೆರವಣಿಗೆಯಲ್ಲಿ ಭಾಗವಹಿಸಿದರು.