ಮಂಗಳೂರು : ವೇಣೂರು ಭಗವಾನ್ ಶ್ರೀ ಬಾಹುಬಲಿ ಮಸ್ತಕಾಭಿಷೇಕದ ಮಹೋತ್ಸವ -2024 ಆರಂಭಗೊಂಡಿರುವುದರಿಂದ ಅತ್ಯಂತ ಜನಸಂದಣಿಯಾಗಿ ರಸ್ತೆ ಸಂಚಾರಕ್ಕೆ ಅಡಚಣೆ ಆಗುವ ಸಾಧ್ಯತೆ ಇದೆ.ಆದ್ದರಿಂದ ಫೆಬ್ರವರಿ 22 ರಿಂದ ಮಾರ್ಚ್ 1 ರವೆರೆಗ ಮೂಡಬಿದ್ರೆ ಕಡೆಯಿಂದ ಬಂದು ವೇಣೂರು ಮೇಲಿನ ಪೇಟೆಯ ಮುಖಾಂತರ ಬೆಳ್ತಂಗಡಿ ಸಂಪರ್ಕಿಸುವ ಲಘು ವಾಹನಗಳು ಪಡ್ಯಾರಬೆಟ್ಟು, ಹೊಕ್ಕಾಡಿಗೋಳಿ, ಕೂಡುರಸ್ತೆ, ಬಜಿರೆ, ಮುದ್ದಾಡಿ, ನೈನಾಡು ಮೂಲಕ ಗೋಳಿಯಂಗಡಿ ಆಗಿ ಬೆಳ್ತಂಗಡಿ ರಸ್ತೆಗೆ ಸಂಪರ್ಕಿಸಬೇಕು. ಬೆಳ್ತಂಗಡಿ ಕಡೆಯಿಂದ ಬಂದು ವೇಣೂರು ಪೇಟೆ ಮುಖಾಂತರ ಮೂಡಬಿದ್ರೆ ಕಡೆಗೆ ಹೋಗುವ ಲಘು ವಾಹನಗಳನ್ನು ಗೋಳಿಯಂಗಡಿಯಿಂದ ಪಥ ಬದಲಿಸಿ ನೈನಾಡು, ಬಜಿರೆ, ಆರಂಬೋಡಿ, ಪಡ್ಯಾರಬೆಟ್ಟು ಮೂಲಕ ಮುಖ್ಯ ರಸ್ತೆಯನ್ನು ಸಂಪರ್ಕಿಸಬೇಕು.
ಮೂಡಬಿದ್ರೆಯಿಂದ ಬೆಳ್ತಂಗಡಿ ಹೋಗುವ ಘನ ವಾಹನಗಳನ್ನು ಮೂಡಬಿದ್ರೆ ಶಿರ್ತಾಡಿ, ನಾರಾವಿ, ಅಳದಂಗಡಿ, ಗುರುವಾಯನಕೆರೆ ಮೂಲಕ ಬೆಳ್ತಂಗಡಿ ಕಡೆಗೆ ಹಾಗೂ ಬೆಳ್ತಂಗಡಿಯಿಂದ ಮೂಡಬಿದ್ರೆಗೆ ಹೋಗುವ ಘನ ವಾಹನಗಳನ್ನು ಗುರುವಾಯನಕೆರೆ, ನಾರಾವಿ, ಶಿರ್ತಾಡಿ ಹಾಗೂ ಮೂಡಬಿದ್ರೆ ಮೂಲಕ ಸಂಚರಿಸುವಂತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಅವರು ಆದೇಶಿಸಿದ್ದಾರೆ.