ಉಡುಪಿ: ಕುಡುಕ ಪತಿ ಮಹಾಶಯನೊಬ್ಬ ಪತ್ನಿಯ ಕಾಲಿನ ಕೆಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಘಟನೆ ಬೈಂದೂರಿನಲ್ಲಿ ನಡೆದಿದೆ. ಇಲ್ಲಿನ ಕಿರಿಮಂಜೇಶ್ವರ ಗ್ರಾಮದ ಸೋಡಿತಟ್ಟು ನಿವಾಸಿ ಶ್ರೀನಿವಾಸ ನಾಯರಿ ಎಂಬವರ ಮಗಳು ವಿಜಯಲಕ್ಷ್ಮೀ 2004ರಲ್ಲಿ ಕಿರಿಮಂಜೇಶ್ವರ ಗ್ರಾಮದ ಹೊಸಮನೆಯ ಶಿವಶಂಕರ ನಾಯರಿ ಎಂಬವರನ್ನು ವಿವಾಹವಾಗಿದ್ದರು. ಸ್ವಲ್ಪ ಸಮಯ ಗಂಡನ ಮನೆಯಲ್ಲಿದ್ದ ವಿಜಯಲಕ್ಷ್ಮೀ ನಂತರ ತಾಯಿ ಮನೆಯಲ್ಲಿದ್ದರು.ಶಿವಶಂಕರ ನಾಯರಿ ಮದ್ಯಪಾನ ಮಾಡಿ ಪತ್ನಿ ವಿಜಯಲಕ್ಷ್ಮಿಯೊಂದಿಗೆ ಜಗಳ ಮಾಡಿ ಹೊಡೆದು, ಬೆದರಿಕೆ ಹಾಕುತ್ತಿದ್ದ ಎಂದು ಎನ್ನಲಾಗಿದೆ.
ಲಲಿತಾ, ಜಯಲಕ್ಷ್ಮಿ, ಗೀತಾ ಎಂಬವರು ವಿಜಯಲಕ್ಷ್ಮಿಯನ್ನು ಕೊಲ್ಲುವ ಉದ್ದೇಶದಿಂದ ಶಿವಶಂಕರ ನಾಯರಿಗೆ ಕುಮ್ಮಕ್ಕು ನೀಡಿದ್ದು, ಅದರಂತೆ ಶಿವಶಂಕರ ಜ.19ರಂದು ಮಧ್ಯಾಹ್ನ ಕಿರಿಮಂಜೇಶ್ವರ ಗ್ರಾಮದ ಶ್ರೀಕಾನವೀರ ಬಸ್ತಿ ಅಮ್ಮನ ವರ ದೈವಸ್ಥಾನದಲ್ಲಿದ್ದ ವಿಜಯಲಕ್ಷ್ಮಿಯ ಕಾಲಿನ ಕೆಳಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಗಿ ಆರೋಪಿಸಲಾಗಿದೆ. ಇದರಿಂದ ಬಟ್ಟೆಗೆ ಹತ್ತಿಕೊಂಡ ಪರಿಣಾಮ ವಿಜಯಲಕ್ಷ್ಮೀ ತೀವ್ರವಾಗಿ ಗಾಯಗೊಂಡಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.