ಬಂಟ್ವಾಳ : ಹಿಂದೂ ಜಾಗರಣ ವೇದಿಕೆಯ ಪ್ರಮುಖ ರಾದ ಅಕ್ಷಯ್ ರಜಪೂತ್ ಕಲ್ಲಡ್ಕ ರವರು ಬಂಟ್ವಾಳ ಮತ್ತು ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ದೊಂಬಿ, ಕೋಮು ಗಲಭೆ, ಗೂಂಡಾಗಿರಿ, ಬೆದರಿಕೆ ಇತ್ಯಾದಿ ನಿರಂತರವಾಗಿ ಮಾಡುತ್ತಾರೆ ಎಂದು ಆರೋಪ ಹೊರಿಸಿ ಕಂದಾಯ ಇಲಾಖೆಗೆ ಶಿಫಾರಸ್ಸು ಮಾಡಿ ಬಿ ಎನ್ ಎಸ್ ಎಸ್ 130 ಕಲಂ ಅಡಿಯಲ್ಲಿ ನೋಟೀಸ್ ಜಾರಿಗೊಳಿಸಿದ ವಿಟ್ಲ ಪೋಲೀಸರ ವಿರುದ್ಧ ಹಿಂದೂ ಜಾಗರಣ ವೇದಿಕೆ ಮಂಗಳೂರು ಗ್ರಾಮಾಂತರ ಜಿಲ್ಲೆ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನೋಟೀಸ್ ಜಾರಿ ಮಾಡಿ ಕಂದಾಯ ಇಲಾಖೆಯ ಮುಖಾಂತರ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತಾರೆ ಎಂದು ಆರೋಪಿಸಿ ರೂ 50000 ಬಾಂಡ್ ಸಲ್ಲಿಸಲು ಸೂಚಿಸಿರುವುದು ಕಾಂಗ್ರೆಸ್ ಸರಕಾರದ ಷಡ್ಯಂತ್ರದ ಒಂದು ಭಾಗ ಎಂದು ಆರೋಪಿಸಿದರು.
ಮಂಗಳವಾರ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಹಿ.ಜಾ.ವೇ.ಮಂಗಳೂರು ಗ್ರಾಮಾಂತರ ಜಿಲ್ಲೆ ಪ್ರಮುಖರು – ಕಾನೂನು ಬಾಹಿರ,ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ನೋಟಿಸ್ ಕಳಿಸಲು ಹಾಗೂ ಕಾನೂನು ಕ್ರಮ ಕೈಗೊಳ್ಳುವ ಧಮ್ ಇಲ್ಲದ ವಿಟ್ಲ ಠಾಣೆಯ ಅಧಿಕಾರಿಗಳು ಸಂಘಪರಿವಾರದ ಕಾರ್ಯಕರ್ತರನ್ನು ಗುರುತಿಸಿ ವಿನಾಕಾರಣ ನೋಟೀಸ್ ನೀಡಲಾಗುತ್ತಿದೆ ಎಂದು ಆರೋಪಿಸಿದರು.
ವಿಟ್ಲ ಮೂಲಕ ಕೇರಳಗಡಿಭಾಗದ ಪರಿಸರಕ್ಕೆ ರಾಜಾರೋಷವಾಗಿ ಅಕ್ರಮ ಗೋ,ಮರಳು ಸಾಗಾಟ,ಡ್ರಗ್ಸ್,ಗಾಂಜಾ ದಂಧೆ ನಡೆಯುತ್ತಿದೆ.ಈ ಬಗ್ಗೆ ಸಂಘಟನೆಯ ಕಾರ್ಯಕರ್ತರು ಮಾಹಿತಿ ನೀಡಿದರೂ,ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಇಂತಹ ದಂಧೆಕೋರರ ವಿರುದ್ದ ಕಾನೂನು ಕ್ರಮ ದಾಖಲಿಸುವುದು ಇಲ್ಲ,ಯಾವುದೇ ಕಾನೂನು ಕ್ರಮಕ್ಕೂ ಮುಂದಾಗುತ್ತಿಲ್ಲ ಹಾಗೂ ಅಕ್ಷಯ್ ರಜಪೂತ್ ಅವರನ್ನು ಮಾತ್ರ ಗುರಿಯಾಗಿಸಿ ಈ ತರಹದ ನೋಟೀಸ್ ಜಾರಿ ಮಾಡಿದ್ದು ಅಸಮಾನತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ನೋಟೀಸನ್ನು ತಕ್ಷಣ ಹಿಂಪಡೆಯಬೇಕು. ಹಾಗೂ ಇನ್ನು ಇತರ ಕಾರ್ಯಕರ್ತರಿಗೆ ಈ ರೀತಿಯ ನೋಟೀಸ್ ನೀಡಿದರೆ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಅವರಿಗೆ ತಕ್ಷಣ ನ್ಯಾಯ ದೊರಕಿಸಲು ಕ್ರಮ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪ್ರಶಾಂತ್ ಕೆಮ್ಲುಗುಡೆ, ನರಸಿಂಹ ಮಾಣಿ, ರಾಜೇಶ್ ಬೊಳ್ಳುಕಲ್ಲು, ಸಮಿತ್ ರಾಜ್ ದಾರೆಗುಡ್ಡೆ, ತಿರುಳೇಶ್ ಪೊಳಳಿ ಅವರು ಉಪಸ್ಥಿತರಿದ್ದರು . ಈ ಪ್ರಕರಣ ಹಿಂದೂ ಸಂಘಟನೆಯ ಕಾರ್ಯಕರ್ತರ ವಿರುದ್ಧ ನಡೆದ ದ್ವೇಷಪೂರ್ಣ ಕ್ರಮ ಇದು ಎಂಬುದು ವ್ಯಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು.