December 5, 2025
WhatsApp Image 2025-11-19 at 10.43.25 AM

ಮಂಗಳೂರು : ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು ಇರುತ್ತಿದ್ದರು. ಅಲ್ಲಿ ಅಂತಹ ಅನಿವಾರ್ಯತೆ ಇತ್ತು, ಯಕ್ಷಗಾನದೊಳಗೆ ಎಷ್ಟೋ ಬಾರಿ ಹೋಮೋಸೆಕ್ಸ್ ಬೆಳೆಯುತ್ತಿತ್ತು ಎಂಬುದಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ್ ಬಿಳಿಮಲೆ ನೀಡಿರುವ ವಿವಾದಾತ್ಮಕ ಹೇಳಿಕೆಗೆ ಯಕ್ಷಗಾನದ ತವರು ನೆಲವಾದ ಕರಾವಳಿಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.

ಫೇಸ್‌ಬುಕ್‌, ವಾಟ್ಸಪ್‌, ಇನ್‌ಸ್ಟಾಗ್ರಾಂ ಮುಂತಾದ ಸೋಷಿಯಲ್‌ ಮೀಡಿಯಾಗಳಲ್ಲಿರುವ ಯಕ್ಷಗಾನ ಗ್ರೂಪ್‌ಗಳಲ್ಲಿ ಬಿಳಿಮಲೆ ಹೇಳಿಕೆ ಭಾರಿ ಚರ್ಚೆಗೆ ಗುರಿಯಾಗಿದ್ದು, ಅನೇಕರು ಬಿಳಿಮಲೆ ವಿರುದ್ಧ ಪ್ರತಿಭಟನೆ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿದ್ವಾಂಸ, ನಿವೃತ್ತ ಪ್ರಾಧ್ಯಾಪಕನಾಗಿರುವ ವ್ಯಕ್ತಿಯೊಬ್ಬರು ಪವಿತ್ರ ಕಲೆಯ ಬಗ್ಗೆ ಹೀನಾಯವಾಗಿ ಮಾತನಾಡಿರುವುದಕ್ಕೆ ಕಲಾವಿದರಿಂದಲೂ, ಯಕ್ಷಗಾನ ಅಭಿಮಾನಿಗಳಿಂದಲೂ ಆಕ್ರೋಶ ವ್ಯಕ್ತವಾಗಿದೆ. ಯಕ್ಷಗಾನ ಅಕಾಡೆಮಿ ಇಂಥ ಅವಮಾನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಸ್ವತಹ ಯಕ್ಷಗಾನ ಕಲಾವಿದ ಎಂದು ಹೇಳಿಕೊಳ್ಳುತ್ತಿರುವ ಬಿಳಿಮಲೆಯವರೂ ಅವರು ಹೇಳಿದ ಅನುಭವಕ್ಕೆ ತುತ್ತಾಗಿದ್ದಾರೆಯೇ ಎಂದು ಅನೇಕರು ಪ್ರಶ್ನಿಸಿದ್ದಾರೆ.

ಭಾಷಣದ ವಿಡಿಯೋ ಹಾಕಿದ ಪತ್ರಿಕೆ

ಈ ನಡುವೆ ಬಿಳಿಮಲೆ ತನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ವರದಿ ಮಾಡಲಾಗಿದೆ ಎಂದು ಸ್ಪಷ್ಟನೆ ಕೊಟ್ಟು ವಿವಾದದಿಂದ ಪಾರಾಗಲು ಯತ್ನಿಸಿದ್ದರೂ ಅವರ ಹೇಳಿಕೆಯನ್ನು ಪ್ರಕಟಿಸಿರುವ ನಾಡಿನ ಪ್ರಮುಖ ಪತ್ರಿಕೆ ಇಂದು ಅವರ ಭಾಷಣದ ಪೂರ್ಣ ವಿಡಿಯೋವನ್ನು ಸೋಷಿಯಲ್‌ ಮೀಡಿಯಾಕ್ಕೆ ಹಾಕಿ ಸತ್ಯದರ್ಶನ ಮಾಡಿಸಿದೆ. ಇದರಲ್ಲಿ ಬಿಳಿಮಲೆಯವರು ಯಕ್ಷಗಾನ ಕಲಾವಿದರ ಕುರಿತು ಬಹಳ ಹಗುರವಾಗಿ ಮಾತನಾಡುತ್ತಿರುವುದು ಕೇಳಿಸುತ್ತಿದೆ.

ಬಿಳಿಮಲೆ ಹೇಳಿದ್ದೇನು?

ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ನಡೆದ ‘ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು’ ಹಾಗೂ ‘ನಾವು ಕೂಗುವ ಕೂಗು’ ಕೃತಿಗಳನ್ನು ಬಿಡುಗಡೆ ಮಾಡಿದ ನಂತರ ಮಾಡಿದ ಭಾಷಣದಲ್ಲಿ ಪುರುಷೋತ್ತಮ ಬಿಳಿಮಲೆಯವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಕ್ಷಣಾರ್ಧದಲ್ಲಿ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್ ಆಗಿದೆ.

ಯಕ್ಷಗಾನ ಕಲಾವದರು ಸಲಿಂಗಿ ಕಾಮಿಗಳಾಗಿರುತ್ತಿದ್ದರು. ಹೆಂಡತಿ ಇದ್ದರೂ ತಿರುಗಾಟದ ಸಂದರ್ಭದಲ್ಲಿ ಆರೆಂಟು ತಿಂಗಳು ಮನೆಯಿಂದ ದೂರ ಇರಬೇಕಾದ ಸಂದರ್ಭದಲ್ಲಿ ಇದು ಅವರಿಗೆ ಅನಿವಾರ್ಯವಾಗಿತ್ತು ಎಂಬ ದಾಟಿಯಲ್ಲಿ ಪುರುಷೋತ್ತಮ ಬಿಳಿಮಲೆ ಮಾತನಾಡಿದ್ದಾರೆ.

ಸ್ತ್ರೀವೇಷದ ಕಲಾವಿದ ಏನಾದರೂ ಸಲಿಂಗಕಾಮ ನಿರಾಕರಿಸಿದರೆ, ಭಾಗವತರು ಮರು ದಿವಸ ಅವರಿಗೆ ಪದ್ಯವನ್ನೇ ಕೊಡುತ್ತಿರಲಿಲ್ಲ. ಮುಂದಿನ ವರ್ಷ ತಿರುಗಾಟಕ್ಕೆ ಮೇಳವೇ ಕಲಾವಿದರಿಗೆ ಸಿಗುತ್ತಿರಲಿಲ್ಲ. ವೇದಿಕೆಯ ಮೇಲೆ ಅವನ ವಿರುದ್ಧ ಸೇಡು ತೀರಿಸಿಕೊಳ್ಳಲಾಗುತ್ತಿತ್ತು. ಮೇಳದಲ್ಲಿ ಅವಕಾಶ ಇಲ್ಲದೆ ಹೋದರೆ ಬದುಕೇ ಇಲ್ಲವೆಂಬ ಒತ್ತಡದಲ್ಲಿ ಕಲಾವಿದರು ಇರುತ್ತಿದ್ದರು ಎಂದಿದ್ದಾರೆ.

ಕಲೆ, ದೈಹಿಕ ಕಾಮನೆಗಳು, ಭಾವನೆಗಳು ಇವೆಲ್ಲ ರಂಗಭೂಮಿಯ ಎದುರು ಕಾಣುವ ಲೋಕಕ್ಕಿಂತ ಭಿನ್ನವಾಗಿ ಪ್ರಕಟಗೊಳ್ಳುವ ಬಗೆ ಇದೆಯಲ್ಲ ಇವೆಲ್ಲ ವಿದ್ವಾಂಸರು, ಜಾನಪದ ವಿದ್ವಾಂಸರು ತಿಳಿದುಕೊಂಡು, ಅರ್ಥಮಾಡಿಕೊಂಡು ಯಾರಿಗೂ ತೊಂದರೆ ಆಗದ ಹಾಗೆ ಯಾರ ಭಾವನೆಗೂ ನೋವಾಗದ ಹಾಗೆ ಅಕ್ಷರದಲ್ಲಿ ಸುಂದರವಾಗಿ ಬರೆಯುವ ಕಲೆಯನ್ನು ಕಲಿತುಕೊಂಡರೆ ಯಕ್ಷಗಾನ ಜಾನಪದಕ್ಕೆ ಇನ್ನೊಂದು ಹೊಸ ಆಯಾಮ ಬರುತ್ತದೆ ಎಂದಿದ್ದಾರೆ.

ಇಲ್ಲಿ ನಾವು ಸತ್ಯವನ್ನು ಹೇಳಲು ಹಿಂಜರಿಯಬಾರದು. ಕಲಾವಿದರು ಮೇಳಕ್ಕೆಂದು ಆರೆಂಟು ತಿಂಗಳು ತಿರುಗಾಟದಲ್ಲೇ ಇದ್ದರಿಂದ ಅವರಿಗೆ ಯಾರೂ ಹೆಣ್ಣು ಕೊಡುತ್ತಿರಲಿಲ್ಲ. ಅಲ್ಲಿನ ಸ್ತ್ರೀ ವೇಷಧಾರಿಗಳೂ ಒತ್ತಡದಲ್ಲಿರುತ್ತಿದ್ದರು. ಅವರ ಮೇಲೆ ಇತರರಿಗೆ ಮೋಹ ಇರುತ್ತಿತ್ತು ಎಂದು ಹೇಳಿದ್ದಾರೆ.

ಈಗ ನಾವು ಹೋಮೋ ಸೆಕ್ಸುವಲ್ ಬಗ್ಗೆ ಮಾತನಾಡುತ್ತೇವೆ, ಬಹಳ ಕೇಳುತ್ತೇವೆ, ಹಿಂದೆ ಅಂತಹ ಮುಕ್ತ ವಾತಾವರಣವಿರಲಿಲ್ಲ. ಯಕ್ಷಗಾನದಲ್ಲಿ ಸ್ತ್ರೀ ವೇಷಧಾರಿಗಳ ಮೇಲೆ ಒತ್ತಡ, ನಾವು ಚಿಕ್ಕವರಿದ್ದಾಗ ನಮ್ಮ ಫಸ್ಟ್ ಕ್ರಶ್‌ಗಳು ಸ್ತ್ರೀ ವೇಷಧಾರಿಗಳು, ಈಗ ಸಿನಿಮಾ ನಟ, ನಟಿಯರ ಹೆಸರನ್ನು ಶಾಲೆ-ಕಾಲೇಜಿಗೆ ಹೋಗುವ ಹುಡುಗರು, ಹುಡುಗಿಯರು ಹೇಳುತ್ತಾರೆ, ನಮಗೆ ಆಗ ಇದ್ದದ್ದು ಕ್ರಶ್ ಸ್ತ್ರೀ ವೇಷಧಾರಿಗಳ ಮೇಲೆ. ಅವರು ರಂಗದ ಮೇಲೆ ಬಂದು ಕುಣಿದರೆ ನೋಡಲು ಏನು ಚೆಂದವಿತ್ತು.

ಆಗೆಲ್ಲ ಕಲಾವಿದ ಮೇಳಕ್ಕೆಂದು ಹೋಗಿ ವಾಪಸಾದಾಗ ಹಲವರಿಗೆ ಮನೆಯೇ ಇರುತ್ತಿರಲಿಲ್ಲ. ಅಂತಹ ದುರಂತ ಕಾವ್ಯಗಳು ಅವರ ಬದುಕಿನಲ್ಲಿವೆ. ಅವನ್ನು ಗ್ರಹಿಸುವ ಶಕ್ತಿ ಸಮಾಜಕ್ಕೆ ಇಲ್ಲವಾಗಿದೆ. ಹಾಡಿನ ಚಪ್ಪಾಳೆಯಷ್ಟೇ ಮುಖ್ಯವಾಗಬಾರದು. ಅವರ ಬದುಕಿನ ಬಿಕ್ಕಟ್ಟಿನ ಕಾವ್ಯಕ್ಕೆ ಅಕ್ಷರಸ್ಥರು, ವಿದ್ವಾಂಸರು ದನಿಯಾಗಬೇಕು ಎಂದು ಬಿಳಿಮಲೆ ಹೇಳಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.