ಪುಂಜಾಲಕಟ್ಟೆ: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ವಿವಿಧೆಡೆ ವಿವಿಧ ದುರಂತಗಳು ಸಂಭವಿಸುತ್ತಿವೆ. ಪೂಂಜಾಲಕಟ್ಟೆ ಬಳಿ ಇಂದು ಮುಂಜಾನೆ ಲಾರಿಯೊಂದು ಪಲ್ಟಿಯಾಗಿ ಒಬ್ಬ ಸ್ಥಳದಲ್ಲೇ ಸಾವಿಗೀಡಾಗಿದ್ದು, ಹಲವರು ಗಾಯಗೊಂಡಿದ್ದಾರೆ.
ಫರಂಗಿಪೇಟೆ ನಿವಾಸಿ ಕಾರ್ತಿಕ್ ಎಂಬವರು ಮೃತಪಟ್ಟವರು. ಗಾಯಗೊಂಡವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಲಾರಿಯೊಳಗೆ ಹತ್ತು ಮಂದಿ ಇದ್ದರು ಎನ್ನಲಾಗಿದೆ.
ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ವೇಳೆ ಪೂಂಜಾಲಕಟ್ಟೆಯ ಶ್ರೀರಾಮಾಂಜನೇಯ ಭಜನಾ ಮಂದಿರದ ಬಳಿ ಲಾರಿ ಪಲ್ಟಿಯಾಗಿದೆ.
ಕಾವಳಪಡೂರು ಮದ್ವ ಎಂಬಲ್ಲಿನ ಶಾಮಿಯಾನ ಅಂಗಡಿಗೆ ಸೇರಿದ ಲಾರಿ ಇದಾಗಿದ್ದು, ಇದರಲ್ಲಿ ಶಾಮಿಯಾನದ ಸಾಮಗ್ರಿಗಳಿದ್ದವು ಎಂದು ತಿಳಿದುಬಂದಿದೆ.
ಲಾರಿಯಡಿಯಲ್ಲಿ ಸಿಲುಕಿದ್ದವರನ್ನು ಮೇಲಕ್ಕೆತ್ತಲು ಸ್ಥಳೀಯರು ಸಹಕರಿಸಿದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.