ಮಂಗಳೂರು: ಗದ್ದೆಯಲ್ಲಿ ದನ ಕಟ್ಟಿ ಹಾಕಲು ಮನೆಯಿಂದ ತೆರಳಿದ್ದ ವೇಳೆ ಮಳೆಯಿಂದಾಗಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಿ. ಎ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮೃತಪಟ್ಟ ಸಿ. ಎ ವಿದ್ಯಾರ್ಥಿನಿ ಆಶ್ನಿ (21) ಎಂದು ಗುರುತಿಸಲಾಗಿದೆ. ತಂದೆಯೊಂದಿಗೆ ಗದ್ದೆಗೆ ಹೋಗಿದ್ದ ಆಶ್ನಿ ಜೊತೆಗೆ ಮನೆಯ ಸಾಕು ನಾಯಿ ಕೂಡಾ ತೆರಳಿದ್ದು, ನಾಯಿಗೆ ಮೊದಲು ವಿದ್ಯುತ್ ಶಾಕ್ ತಗುಲಿದೆ. ಶಾಕ್ ಹೊಡೆದಿದ್ದರಿಂದ ನಾಯಿ ಗದ್ದೆಯಲ್ಲಿ ಬಿದ್ದು ಹೊರಳಾಡುವುದನ್ನು ನೋಡಿ ಆಶ್ನಿ ನಾಯಿಯ ರಕ್ಷಣೆಗೆ ಮುಂದಾಗಿದ್ದು ಈ ವೇಳೆ ಗಮನಿಸದೇ ತುಂಡಾಗಿ ಬಿದ್ದಿದ್ದ ತಂತಿ ತುಳಿದು ಶಾಕ್ ಗೆ ಒಳಗಾಗಿ ಮೃತಪಟ್ಟಿದ್ದಾಳೆ. ಭಾರೀ ಪ್ರಮಾಣದಲ್ಲಿ ಗಾಳಿ ಮತ್ತು ಮಳೆಯಿಂದ ವಿದ್ಯುತ್ ತಂತಿ ತುಂಡಾಗಿ ಗದ್ದೆಯಲ್ಲಿ ಬಿದ್ದಿದ್ದರಿಂದ ಈ ಅನಾಹುತ ನಡೆದಿದೆ.