March 21, 2026
WhatsApp Image 2024-06-19 at 2.42.45 PM

ಮುಲ್ಕಿ : ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ತೈಲ ಬೆಲೆಯ ಮೇಲಿನ ಮಾರಾಟ ತೆರಿಗೆ ಏರಿಸಿ ಜನಸಾಮಾನ್ಯರ ಮೇಲೆ ಬರೆ ಎಳೆದಿದ್ದಾರೆ. ವಾಲ್ಮೀಕಿ ನಿಗಮ ಸಹಿತ ಅನೇಕ ಭ್ರಷ್ಟಾಚಾರದಲ್ಲಿ ತೊಡಗಿದ ಮುಖ್ಯಮಂತ್ರಿಗಳು ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಆಗ್ರಹಿಸಿದ್ದಾರೆ.

ಕಿನ್ನಿಗೋಳಿಯ ಯುಗಪುರುಷದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಮತ ಹಾಕದವರ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. ಅಲ್ಲದೆ ಅವೈಜ್ಞಾನಿಕ ಗ್ಯಾರಂಟಿಗಳಿಂದ ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ರಾಜ್ಯದ ಬಡಜನರ ಮೇಲೆ ತೆರಿಗೆ ಭಾರ ಹೊರಿಸಿ ಖಜಾನೆ ಭರ್ತಿ ಮಾಡಲು ಹೊರಟಿದೆ ಎಂದು ಆರೋಪಿಸಿದರು. ರಾಜ್ಯ ಸರ್ಕಾರ ಈಗಾಗಲೇ ವಿದ್ಯುತ್, ಬಸ್ ಪ್ರಯಾಣ, ಹಾಲು ತರಕಾರಿ ಬೇಳೆಕಾಳು, ಮದ್ಯದ ಬೆಲೆ ಏರಿಕೆ ಮಾಡಿದ್ದು, ಇದೀಗ ಪೆಟ್ರೋಲ್ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಹೆಚ್ಚಿಸಿ ರಾಜ್ಯದ ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಲಾಗಿದೆ. ಸರ್ಕಾರ ನಡೆಸಲು ಆಗದಿದ್ದರೆ ಸಿಎಂ ರಾಜೀನಾಮೆ ಕೊಡಲಿ ಎಂದು ಸವಾಲು ಹಾಕಿದರು. ಸರ್ಕಾರದಿಂದ ರೈತರಿಗೆ ನೀಡುವ ಕೃಷಿ ಯಂತ್ರೋಪಕರಣಗಳನ್ನು ಸ್ಥಗಿತಗೊಳಿಸಿರುವ ಸರ್ಕಾರ, ರೈತ ವಿರೋಧಿ ಸರ್ಕಾರವಾಗಿದ್ದು ಶಿಕ್ಷಕರಿಗೆ ಸರಿಯಾದ ವೇತನ ನೀಡದ ಸರ್ಕಾರ ಜನ ವಿರೋಧಿ ಸರ್ಕಾರ ಎಂದು ಹರಿಹಾಯ್ದರು. ಕೂಡಲೇ ಸರ್ಕಾರ ತೈಲಬೆಲೆ ಇಳಿಕೆ ಮಾಡಬೇಕು ಎಂದು ಹೇಳಿದ ಅವರು, ನಾಳೆ ಜೂ.20 ರಂದು ಕಿನ್ನಿಗೋಳಿಯ ಸುಖಾನಂದ ಶೆಟ್ಟಿ ಸರ್ಕಲ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಸರ್ಕಾರದ ತೈಲ ಬೆಲೆ ಏರಿಕೆ ವಿರುದ್ಧ ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಬಿಜೆಪಿ ಪಕ್ಷದ ವತಿಯಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.

About The Author

Leave a Reply

Your email address will not be published. Required fields are marked *

You cannot copy content of this page.