ಅಧ್ಯಕ್ಷರಾಗಿ ಡಾ.ಪುರುಷೋತ್ತಮ ಬಿಳಿಮಲೆ ನೇಮಕವಾಗಿದ್ದು, ಪ್ರೊ. ರಾಮಚಂದ್ರಪ್ಪ, ಡಾ.ವಿ.ಪಿ.ನಿರಂಜನಾರಾಧ್ಯ, ಟಿ.ಗುರುರಾಜ್, ಡಾ.ರವಿಕುಮಾರ್ ನೀಹ, ದಾಕ್ಷಾಯಿಣಿ ಹುಡೇದ, ಯಾಕೂಬ್ ಖಾದರ್, ವಿರೂಪಣ್ಣ ಕಲ್ಲೂರು ಸದಸ್ಯರಾಗಿ ನೇಮಕವಾಗಿದ್ದಾರೆ.

ಯಾಕೂಬ್ ಖಾದರ್ ಗುಲ್ವಾಡಿ:
ಯಾಕೂಬ್ ಖಾದರ್ ಗುಲ್ವಾಡಿಯವರು ಹಲವು ವರ್ಷಗಳಿಂದ ಕನ್ನಡ ಸಾಹಿತ್ಯ, ಸಿನಿಮಾ, ಸಂಸ್ಕೃತಿ, ಭಾಷೆ, ಪ್ರಾಚ್ಯ ವಸ್ತುಗಳ ಸಂಗ್ರಹ, ಪುಟಾಣಿ ಗ್ರಂಥಾಲಯ, ವಿಶೇಷವಾಗಿ ಅಭಿನಯ ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ, ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ, ಡಾ. ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿ ಆಯ್ಕೆ ಸಮಿತಿ ನಿರ್ದೇಶಕರಾಗಿ
ಕೆಲಸ ಮಾಡಿದ್ದಾರೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ಕನ್ನಡದ ನಿರ್ದೇಶಕರಾದ ಡಾ. ಗಿರೀಶ ಕಾಸರವಳ್ಳಿ (ಗುಲಾಬಿ ಟಾಕೀಸ್), ಡಾ.ನಾಗತಿಹಳ್ಳಿ ಚಂದ್ರಶೇಖರ( ಇಸ್ಟಕಾಮ್ಯ), ನಿಖಿಲ್ ಮಂಜು ಲಿಂಗೆ ಗೌಡ( ಹಜ್ ) ಮುಂತಾದ ಹಿರಿಯ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅನುಭವವಿದೆ. ಇವರ ಮೊದಲ ನಿರ್ಮಾಣದ ‘ರಿಸರ್ವೇಶನ್’ ಎಂಬ ಕನ್ನಡ ಚಲನ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ (ರಜತ ಕಮಲ) ಸೇರಿದಂತೆ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ BIFFES 2018 ಬಂದಿದೆ.
‘ಟ್ರಿಪಲ್ ತಲಾಖ್’ ಎನ್ನುವ ಸೂಕ್ಷ್ಮ ಸಂವೇದನೆಯ ಬ್ಯಾರಿ ಬಾಷೆಯ ಚಲನಚಿತ್ರವನ್ನು ನಿರ್ದೇಶನ ಮಾಡಿದ್ದಲ್ಲದೆ ‘ಆ 90 ದಿನಗಳು’ ಎಂಬ ಸಿನಿಮಾವನ್ನು ರೊನಾಲ್ಡ್ ಲೋಬೊ ಅವರೊಂದಿಗೆ ಒಟ್ಟಾಗಿ ನಿರ್ದೇಶನ ಮಾಡಿದ್ದಾರೆ. ಕರ್ನಾಟಕ ಚಲನಚಿತ್ರ ಅಕಾಡೆಮಿ ಮತ್ತು ಕರ್ನಾಟಕ ವಾರ್ತ ಇಲಾಖೆಗೆ
ಸಾಕ್ಷ್ಯಚಿತ್ರ ನಿರ್ದೇಶನ ಮಾಡಿದ್ದು ಅಂಡಮಾನ್ ಮತ್ತು ತಮಿಳುನಾಡಿನಲ್ಲಿ ನಡೆದ ಸುನಾಮಿ ಸಂತ್ರಸ್ತರ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಕ್ಕೆ ಕೇಂದ್ರ ಸರ್ಕಾರದ ಗೌರವ, ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಗೌರವ, ದುಬೈ ಕನ್ನಡ ಸಂಘದ ಗೌರವ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ನೂರಾರು ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ.

ಗುಲ್ವಾಡಿ ಎಂಬ ಪುಟ್ಟ ಹಳ್ಳಿಯಲ್ಲಿ ಕಳೆದ ಇಪ್ಪತ್ತೈದು ವರ್ಷಗಳಿಂದ ಗುಲ್ವಾಡಿ ಟಾಕೀಸ್ ಸಂಸ್ಥೆಯ ಮೂಲಕ ಕನ್ನಡದ ಮೊದಲ ಕಾದಂಬರಿಯ ಪಿತಾಮಹ ಗುಲ್ವಾಡಿ ವೆಂಕಟರಾವ್ ಪ್ರಶಸ್ತಿ ಜೊತೆಗೆ ಸಮುದಾಯ ಕರ್ನಾಟಕ, ಸಧ್ಬಾವನ ಕುಂದಾಪುರ, ಸಹಮತ ಕುಂದಾಪುರ ಸಂಘಟನೆಯ ಮೂಲಕ ಕೋಮು ಸೌಹಾರ್ದತೆಗಾಗಿ ಕಾರ್ಯಕ್ರಮ ವಿಶೇಷವಾಗಿ ಮಾನಸಿಕ ಆರೋಗ್ಯಕ್ಕಾಗಿ ಮನಸ್ಮಿತ ಫೌಂಡೇಶನ್ನಿನ ನಿರ್ದೇಶಕನಾಗಿ ನೂರಾರು ಮಾನಸಿಕ ಆರೋಗ್ಯ ಉಚಿತ ವೈದ್ಯಕೀಯ ಶಿಬಿರ ಮತ್ತು ಔಷಧ ವಿತರಣೆಯಂತಹ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ತಿರುಗಾಡಿದ ಇಪ್ಪತ್ತಕ್ಕು ಹೆಚ್ಚು ದೇಶಗಳ ಅನುಭವಗಳನ್ನು ‘ಶ್ರೀಲಂಕಾ ಒಂದು ಸುಂದರ ದ್ವೀಪ ರಾಷ್ಟ್ರ’, ‘ಅಂಡಮಾನ್ ಮತ್ತು ಸುನಾಮಿ’, ‘ನನ್ನ ಫಾರೀನ್ ಟೂರಿಂಗ್ ಟಾಕೀಸ್’ ಎಂಬ ಮೂರು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.