March 19, 2026
WhatsApp Image 2025-09-16 at 10.29.06 AM

ಬೆಳ್ತಂಗಡಿ : ಧರ್ಮಸ್ಥಳ ಶವ ಹೂತ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಇದೀಗ ಬಂಗ್ಲೆಗುಡ್ಡೆ ಯಲ್ಲಿ ರಾಶಿ ರಾಶಿ ಮಾನವ ಅಸ್ಥಿಪಂಜರಗಳಿವೆ ಎಂಬ ಸೌಜನ್ಯ ಮಾವ ವಿಠಲ ಗೌಡ ಹೇಳಿಕೆಯ ಬೆನ್ನಲ್ಲೇ ಇಡೀ ಬಂಗ್ಲೆಗುಡ್ಡೆ ಕಾಡನ್ನು ಅಧಿಕೃತವಾಗಿ ಸಮೀಕ್ಷೆಗೆ ಒಳಪಡಿಸಲು ಎಸ್‌ಐಟಿ ಒಲವು ತೋರಿದೆ ಎಂದು ವರದಿಯಾಗಿದೆ. ಸಾಕ್ಷಿ ದೂರುದಾರ ಪೊಲೀಸರಿಗೆ ತಂದೊಪ್ಪಿಸಿದ್ದ ತಲೆಬುರುಡೆಯನ್ನು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕ ಬಂಗ್ಲೆಗುಡ್ಡೆಯ ಕಾಡಿನಿಂದ ಹೊರತೆಗೆಯಲಾಗಿತ್ತು.

ತಲೆಬುರುಡೆ ಇದ್ದ ಆ ಜಾಗವನ್ನು ತೋರಿಸಿದ್ದ ಧರ್ಮಸ್ಥಳ ಗ್ರಾಮದ ಪಾಂಗಾಳದ ವಿಠಲ ಗೌಡ ಅವರನ್ನು ಎಸ್‌ಐಟಿ ಅಧಿಕಾರಿಗಳು ಈಚೆಗೆ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದರು. ಆ ಜಾಗವು ಅರಣ್ಯ ಇಲಾಖೆಯ ಬೆಳ್ತಂಗಡಿ ವಲಯದ ವ್ಯಾಪ್ತಿಯಲ್ಲಿದೆ. ಆ ಸ್ಥಳದ ಮಹಜರು ನಡೆದ ಬಳಿಕ ವಿಠಲ ಗೌಡ ಅವರು ಮಾತನಾಡಿದ್ದ ದೃಶ್ಯಗಳಿದ್ದ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.
ಧರ್ಮಸ್ಥಳ ಸಾಮೂಹಿಕ ಶವ ದಫನ ಪ್ರಕರಣವನ್ನು ತನಿಖೆ ಮಾಡುತ್ತಿರುವ ಪ್ರಣವ್ ಮೊಹಾಂತಿ ನೇತೃತ್ವದ ಎಸ್‌ಐಟಿ, 2 ವಾರಗಳಿಂದ ಬಂಗ್ಲೆಗುಡ್ಡೆ ಕೇಂದ್ರಿತವಾಗಿಯೇ ತನಿಖೆ ನಡೆಸುತ್ತಿದೆ. ಇದೀಗ ಅರಣ್ಯ ಇಲಾಖೆಯ ಮೂಲಕ ಬಂಗ್ಲೆಗುಡ್ಡೆ ಕಾಡಿನ ಸಮಗ್ರ ಸಮೀಕ್ಷೆ ನಡೆಸಿ ಅಲ್ಲಿನ ವಿಸ್ತೀರ್ಣ, ಮರಗಳ ಸಂಖ್ಯೆ ಮತ್ತಿತರ ಮಾಹಿತಿಯನ್ನು ಒಳಗೊಂಡ ಅಧಿಕೃತ ವರದಿ ತರಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿದು ಬಂದಿದೆ.

ಬುರುಡೆ ಮೂಲ ಮತ್ತು ಅದನ್ನು ಹಸ್ತಾಂತರಿಸಿದ ಉದ್ದೇಶದ ಬಗ್ಗೆ ತನಿಖೆ ಮಾಡುತ್ತಿರುವ ನಡುವೆಯೇ, ಅದೇ ಕಾಡಿನಲ್ಲಿ ಇನ್ನೂ ರಾಶಿ ರಾಶಿ ಬುರುಡೆಗಳಿವೆ ಎಂಬ ವಿಠಲ ಗೌಡ ಹೇಳಿಕೆ ಮತ್ತಷ್ಟು ಆತಂಕ ಮೂಡಿಸಿತ್ತು. ವಿಠಲ ಗೌಡ ಕರೆದೊಯ್ದು 2 ಬಾರಿ ಮಹಜರು ನಡೆಸಿರುವ ಎಸ್‌ಐಟಿ ಯಾವುದೇ ಕ್ಷಣದಲ್ಲಿ ಬಂಗ್ಲೆಗುಡ್ಡೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ.
ಬಂಗ್ಲೆಗುಡ್ಡೆಯು ಅರಣ್ಯ ಪ್ರದೇಶವಾದ ಕಾರಣ ಮುಂದಿನ ಹಂತದ ತನಿಖೆ ನಡೆಸುವ ಮೊದಲು ಅಲ್ಲಿನ ವೈಜ್ಞಾನಿಕ ವರದಿ ತರಿಸಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಮಂಗಳವಾರ ಅರಣ್ಯ ಇಲಾಖೆ ಅಧಿಕಾರಿಗಳು ಬಂಗ್ಲೆಗುಡ್ಡೆಗೆ ಭೇಟಿ ನೀಡಿ ಸಮೀಕ್ಷೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಾಡಿನ ವ್ಯಾಪ್ತಿ, ಮರಗಳ ಸಂಖ್ಯೆ, ಮರಗಳ ವಯಸ್ಸು ಮತ್ತಿತರ ಮಾಹಿತಿ ಸಂಗ್ರಹಗೊಳ್ಳಲಿದೆ

About The Author

Leave a Reply

Your email address will not be published. Required fields are marked *

You cannot copy content of this page.