ಉಡುಪಿ: ಉಡುಪಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ಅಬ್ಬರಕ್ಕೆ ದೊಡ್ಡಣಗುಡ್ಡೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಡುಗೆಮನೆ ಗೋಡೆ ಕುಸಿದು ಬಿದ್ದಿದೆ. ಅಡುಗೆ ತಯಾರಿಸುವ ಕೋಣೆಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ವಿದ್ಯಾರ್ಥಿಗಳು ಪಾರಾಗಿದ್ದಾರೆ. ಭಾರೀ ಮಳೆ ನೀರಿಗೆ ತೇವಗೊಂಡು ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಗೋಡೆ ಕುಸಿದು ಬಿದ್ದ ಪರಿಣಾಮ ಅಡುಗೆ ಪರಿಕರ, ಗ್ಯಾಸ್ ಸಿಲಿಂಡರ್, ಮಕ್ಕಳು ಊಟಕ್ಕೆ ಬಳಸುವ 40ಕ್ಕೂ ಹೆಚ್ಚು ಸ್ಟೀಲ್ ಬಟ್ಟಲುಗಳು ಮಣ್ಣಿನಡಿ ಸಿಲುಕಿವೆ. 1990ರ ಸುಮಾರಿಗೆ ಇಲ್ಲಿ ಅಂಗನವಾಡಿಯನ್ನು ನಿರ್ಮಾಣ ಮಾಡಲಾಗಿತ್ತು. ಮುಂದೆ ಹೊಸ ಕಟ್ಟಡ ನಿರ್ಮಾಣವಾದಾಗ ಅಂಗನವಾಡಿ ಕೊಠಡಿಯನ್ನು ಅಡುಗೆಗೆ ಬಳಸಲಾಯಿತು. ಕಳೆದ ರಾತ್ರಿ ಅಂಗನವಾಡಿಯ ಗೋಡೆ ಕುಸಿದು ಬಿದ್ದಿದೆ. ಸದ್ಯ ಪಕ್ಕದ ಶಾಲೆಯ ಹಾಲ್ ಗೆ ಅಡುಗೆ ಮನೆಯನ್ನು ಶಿಫ್ಟ್ ಮಾಡಲಾಗಿದೆ. ಅಡುಗೆ ಪರಿಕರ, ಕುರ್ಚಿ- ಮೇಜು, ಬೆಂಚುಗಳು ಮಣ್ಣಿನ ಗೋಡೆಯಡಿ ಸಿಲುಕಿವೆ. ಶಾಲೆಯ ಕೆಲ ಕೊಠಡಿಗಳ ಛಾವಣಿ ಸೋರುತ್ತಿದೆ. ಇದೇ ಅಡುಗೆ ಕೋಣೆಯಲ್ಲಿ ಮಕ್ಕಳು ಊಟಕ್ಕೆ ಕುಳಿತುಕೊಳ್ಳುತ್ತಿದ್ದರು. ಶಿಕ್ಷಕರು, ಅಡುಗೆಯವರು, ಸಹಾಯಕರು ಓಡಾಡುವ ಸಂದರ್ಭ ಘಟನೆ ನಡೆದಿದ್ದರೆ ದೊಡ್ಡ ಅನಾಹುತವೇ ಆಗುತ್ತಿತ್ತು. ಅದೃಷ್ಟವಶಾತ್ ಎಲ್ಲರೂ ಪಾರಾಗಿದ್ದಾರೆ ಎಂದು ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ನಿರ್ಮಲಾ ಹೇಳಿದ್ದಾರೆ.