
ಕುಂದಾಪುರ: ಅತಿ ವೇಗದಿಂದ ಬಂದ ಕಾರೊಂದು ಬ್ಯಾರಿಕೇಡ್ ಸಮೀಪ ಬ್ರೇಕ್ ಹಾಕಿದ ಪರಿಣಾಮ ನಿಯಂತ್ರಣ ತಪ್ಪಿ ಮಿನಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಘಟನೆ ಶುಕ್ರವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೀಜಾಡಿ ಕ್ರಾಸ್ ಎದುರು ಧನಲಕ್ಷ್ಮಿ ಹಾರ್ಡವೇರ್ ಸಮೀಪ ನಡೆದಿದೆ. ಘಟನೆಯಲ್ಲಿ ಹುಂಡೈ ಐ 10 ಕಾರು ನಾಲ್ಕು ಪಲ್ಟಿಯಾಗಿ ಸರ್ವೀಸ್ ರಸ್ತೆಯಲ್ಲಿ ಬರುತ್ತಿದ್ದ 407 ಟ್ರಕ್ಗೆ ಗುದ್ದಿ, ಮೇಲ್ಮುಖವಾಗಿ ಪಲ್ಟಿಯಾಗಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾರಿಗೂ ಪ್ರಾಣ ಹಾನಿಯಾಗಿಲ್ಲ. ವೇಗವಾಗಿ ಬಂದ ಕಾರು ಚಾಲಕನಿಗೆ ಅಲ್ಲಿ ಹಾಕಿದ ಬ್ಯಾರಿಕೇಡ್ ಕಂಡು ಹಠಾತ್ತನೆ ಬ್ರೇಕ್ ಹಾಕಿದ್ದಾನೆ. ಕಾನೂನಿನ ಪ್ರಕಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರೀಕೇಡ್ ಅಳವಡಿಸಲು ಅವಕಾಶವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಚಾರದ ಹಂಬಲಕ್ಕೆ ಬಿದ್ದವರು ಜಾಹೀರಾತುಗಳನ್ನು ಮುದ್ರಿಸಿ ಕಾನೂನು ಬಾಹಿರವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸುತ್ತಿದ್ದಾರೆ. ಇದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
