March 19, 2026
WhatsApp Image 2025-05-13 at 12.33.13 PM

ಬೆಳ್ತಂಗಡಿ: ಆರ್ಥಿಕ ಸಮಸ್ಯೆ ಮತ್ತು ಅನಾರೋಗ್ಯದ ಕಾರಣದಿಂದ ವೃದ್ಧೆ ತಾಯಿ ಹಾಗೂ ಮಗ ಅತಿಯಾಗಿ ನಿದ್ರೆ ಮಾತ್ರೆ ಸೇವಿಸಿದ್ದರು. ಈ ಪೈಕಿ ತಾಯಿ ಮೃತಪಟ್ಟು, ಪುತ್ರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಮೇ 12ರಂದು ಸಂಭವಿಸಿದೆ.

ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ದಿ| ಕುಂಞರಾಮನ್ ನಾಯರ್ ಅವರ ಪತ್ನಿ ಕಲ್ಯಾಣಿ (96) ಮೃತರಾದವರು. ಅವರ ಪುತ್ರ, ಖ್ಯಾತ ಜನಪದ ಕಲಾವಿದ, ಶಿಕ್ಷಕ ಜಯರಾಂ ಕೆ. (58) ಅವರ ಸ್ಥಿತಿ ಗಂಭೀರವಾಗಿದೆ.

ಕಲ್ಯಾಣಿ ಮತ್ತು ಜಯರಾಂ ಅವರ ಮನೆಯಲ್ಲಿ ಯಾವುದೇ ಚಟುವಟಿಕೆ ಇಲ್ಲದಿರುವುದನ್ನು ಗಮನಿಸಿ ನೆರೆ ಹೊರೆಯವರು ಬಂದು ಪರಿಶೀಲಿಸಿದಾಗ ತಾಯಿ ಮತ್ತು ಮಗ ಮನೆಯ ದೇವರ ಕೋಣೆ ಎದುರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ಬಳಿಕ ಊರವರು ಸೇರಿ ಮನೆಯ ಬಾಗಿಲು ತೆಗೆದು ಒಳ ಪ್ರವೇಶಿಸಿದಾಗ ಇಬ್ಬರೂ ಉಸಿರಾಡುತ್ತಿರುವುದು ಕಂಡುಬಂದಿತ್ತು.

ತಕ್ಷಣ ಅವರಿಬ್ಬರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ತೀವ್ರ ನಿಗಾ ಘಟಕದಲ್ಲಿದ್ದ ತಾಯಿ ಕಲ್ಯಾಣಿ ಅವರು ಮೇ 12ರಂದು ಸಂಜೆ ಸಾವನ್ನಪ್ಪಿದ್ದಾರೆ. ಮಗ ಜಯರಾಂ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಚಿಂತಾಜನಕವಾಗಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ತಾಯಿ ಮಲಗಿದ ಜಾಗದಲ್ಲಿ ಜಯರಾಂ ಅವರು ಬರೆದಿರುವ ನಾಲ್ಕು ಪುಟಗಳ ಪತ್ರ ಲಭಿಸಿದ್ದು ಅದರಲ್ಲಿ ಸಾಲದ ಸಮಸ್ಯೆ, ತನ್ನ ಅನಾರೋಗ್ಯದ ಕಾರಣದಿಂದ ನಾವು ನಿದ್ರೆ ಮಾತ್ರೆ ಸೇವಿಸಿರುತ್ತೇವೆ. ನಮ್ಮನ್ನು ಬದುಕಿಸಲು ಪ್ರಯತ್ನಿಸಬೇಡಿ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ತಾಯಿ ಕಳೆದ 4 ವರ್ಷಗಳಿಂದ ವಯೋ ಸಹಜ ಅನಾರೋಗ್ಯದಿಂದ ಮಲಗಿದಲ್ಲೇ ಇದ್ದು ಅವರ ಆರೈಕೆಯನ್ನು ಮಗನೇ ಮಾಡುತ್ತಿದ್ದರು. ಆದ್ದರಿಂದ ನಾನು ಸತ್ತರೆ ಅಮ್ಮನನ್ನು ನೋಡಿಕೊಳ್ಳುವವರು ಯಾರು ಎಂಬ ಭಯದಿಂದ ನಾವಿಬ್ಬರೂ ಜತೆಯಾಗಿ ಸಾಯುತ್ತಿದ್ದೇವೆ ಎಂದು ಬರೆದಿದ್ದಾರೆ ಎನ್ನಲಾಗಿದೆ.

ತಾಯಿಗೆ ಅವರು ಮೊದಲು ಮಾತ್ರೆ ನೀಡಿ ಬಳಿಕ ಪುತ್ರ ಮಾತ್ರೆ ಸೇವಿಸಿದರೇ ಅಥವಾ ಇಬ್ಬರೂ ಜತೆಗೆ ಮಾತ್ರೆ ಸೇವಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಜಯರಾಂ ಅವರು ಪ್ರಸಿದ್ಧ ಕಲಾವಿದರಾಗಿದ್ದು, ನಾಟಕ ರಚನೆಕಾರ ರಾಗಿ, ಜಾನಪದ ಕಲಾರಾಧಕರಾಗಿ, ಚಿತ್ರಕಲಾ ಶಿಕ್ಷಕರಾಗಿ ರಾಜ್ಯಮಟ್ಟದ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿಯೂ ಇದ್ದ ಅವರು ಕಳೆದ 26 ವರ್ಷಗಳಿಂದ ಮುಂಡಾಜೆಯಲ್ಲಿ ಕಲಾಕುಂಚ ಆರ್ಟ್ಸ್ ಎಂಬ ಟ್ಯೂಶನ್ ಸೆಂಟರ್ ನಡೆಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.