
ಮೂಡುಬಿದಿರೆ: ಅತ್ಯಂತ ಹಿಂಸಾತ್ಮಕವಾಗಿ ಹಾಗೂ ಅಕ್ರಮವಾಗಿ ಸಾಗಿಸುತ್ತಿದ್ದ ಎಂಟು ಜಾನುವಾರುಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ಎರಡು ವಾಹನಗಳನ್ನು ಮೂಡುಬಿದಿರೆ ಪೊಲೀಸರು ಭಾನುವಾರ ತೋಡಾರು ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯ ಪಿಎಸ್ಐ ಪ್ರತಿಭಾ ಕೆ.ಸಿ. ಹಾಗೂ ಸಿಬ್ಬಂದಿ ಗಸ್ತು ಕರ್ತವ್ಯದಲ್ಲಿದ್ದಾಗ, ತೋಡಾರು ಕಡೆಗೆ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ತೋಡಾರು ಗ್ರಾಮದ ಪ್ರವೇಶದ್ವಾರದ ಬಳಿ ಗರಡಿ ಕಡೆಯಿಂದ ಬರುತ್ತಿದ್ದ ವ್ಯಾಗನ್-ಆರ್ ಕಾರು ಮತ್ತು ಅದನ್ನು ಹಿಂಬಾಲಿಸುತ್ತಿದ್ದ ಪಿಕಪ್ ವಾಹನವನ್ನು ತಡೆಯಲು ಸಂಕೇತ ನೀಡಿದರು. ಆದರೆ, ವಾಹನಗಳು ನಿಲ್ಲಿಸದೆ ಮುನ್ನುಗ್ಗಿದಾಗ ಪೊಲೀಸರು ಬೆನ್ನಟ್ಟಿ ಅವುಗಳನ್ನು ತಡೆದಿದ್ದಾರೆ.
ಪೊಲೀಸರು ವಾಹನವನ್ನು ಸುತ್ತುವರಿಯುತ್ತಿದ್ದಂತೆಯೇ, ಪಿಕಪ್ ಚಾಲಕ ಹರ್ಷದ್ ಮತ್ತು ಆತನೊಂದಿಗಿದ್ದ ಇತರರು ಸ್ಥಳದಿಂದ ಓಡಿಹೋಗಿದ್ದಾರೆ. ಪಿಕಪ್ ವಾಹನಕ್ಕೆ ಬೆಂಗಾವಲಾಗಿ (ಎಸ್ಕಾರ್ಟ್) ಬಂದಿದ್ದ ವ್ಯಾಗನ್-ಆರ್ ಕಾರಿನ ಚಾಲಕ ಸಫರ್ ಹಾಗೂ ಹಂಡೇಲು ನಿವಾಸಿ ಅಬೂಬಕರ್ ಕೂಡ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಪಿಕಪ್ ವಾಹನವನ್ನು ಪರಿಶೀಲಿಸಿದಾಗ, ಅದರಲ್ಲಿ ಎರಡು ಹಸುಗಳು, ಎರಡು ಎತ್ತುಗಳು ಮತ್ತು ನಾಲ್ಕು ಗಂಡು ಕರುಗಳನ್ನು ಕಾಲು ಮತ್ತು ಕುತ್ತಿಗೆಗೆ ಹಗ್ಗದಿಂದ ಬಿಗಿದು ಅತ್ಯಂತ ಹಿಂಸಾತ್ಮಕವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ಸದ್ಯ ಪೊಲೀಸರು ಈ ಎಲ್ಲಾ ಜಾನುವಾರುಗಳನ್ನು ರಕ್ಷಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
