

ಮಂಗಳೂರು: ಮಂಗಳೂರು- ಸುಬ್ರಹ್ಮಣ್ಯ ನಡುವೆ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್ ರೈಲು ಓಡಾಟ ನಡೆಸಬೇಕೆಂಬ ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದ್ದು, ರೈಲು ಸಂಚಾರ ಆರಂಭವಾಗಿದೆ.
ಈ ಪ್ಯಾಸೆಂಜರ್ ರೈಲು ಮಂಗಳೂರಿನಿಂದ (ಮಂಗಳೂರು ಸೆಂಟ್ರಲ್) ಬೆಳಗ್ಗೆ 4 ಗಂಟೆಗೆ ಹೊರಟು 6.30ಕ್ಕೆ ಸುಬ್ರಹ್ಮಣ್ಯ ರೋಡ್ ನಿಲ್ದಾಣಕ್ಕೆ ತಲುಪಲಿದೆ. ಬೆಳಗ್ಗೆ ಗಂಟೆ 7ಕ್ಕೆ ಸುಬ್ರಹ್ಮಣ್ಯ ನಿಲ್ದಾಣದಿಂದ ಹೊರಡುವ ರೈಲು ಬೆಳಗ್ಗೆ 9.30ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಹಾಗೆಯೇ ಸಂಜೆ 5.45 ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ಹೊರಟು 8.10ಕ್ಕೆ ಸುಬ್ರಹ್ಮಣ್ಯ ರೋಡ್ ತಲುಪಲಿದೆ.
ರಾತ್ರಿ 8.40ಕ್ಕೆ ಸುಬ್ರಹ್ಮಣ್ಯ ನಿಲ್ದಾಣದಿಂದ ಹೊರಡುವ ರೈಲು ರಾತ್ರಿ 11.10ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ. ಮಂಗಳೂರು- ಬೆಂಗಳೂರು ರೈಲು ಮಾರ್ಗ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದ ಮೂಲಕ ಹಾದು ಹೋಗುತ್ತಿದೆ. ಆದರೆ ಇಲ್ಲಿ ಎಕ್ಸ್‌ಪ್ರೆಸ್ ರೈಲು ಓಡಾಟ ಮಾತ್ರವೇ ನಡೆಸುತ್ತಿದೆ. ಮಂಗಳೂರಿನಿಂದ ಪುತ್ತೂರು ವರೆಗೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ಸಮಯದಲ್ಲಿ ಪ್ಯಾಸೆಂಜರ್ ರೈಲು ಓಡಾಟ ನಡೆಸುತ್ತಿದ್ದು, ಆದರೆ ಈ ಭಾಗ್ಯ ಸುಬ್ರಹ್ಮಣ್ಯಕ್ಕೆ ಇಲ್ಲದಂತಾಗಿತ್ತು. ಈಗ ಆ ಭಾಗ್ಯ ದೊರಕಿದಂತಾಗಿದೆ.