ಮಂಗಳೂರು : ಜನಾರ್ಧನ ಪೂಜಾರಿ ಅಂತಹ ನಾಯಕರೇ ನಿಂತಾಗ ಈ ಜಿಲ್ಲೆಯ ಜನ ಜಾತಿಯನ್ನು ನೋಡಿಲ್ಲ ಹಾಗಿರುವಾಗ ಈ ಬಾರಿ ಜಾತಿ ನೋಡುತ್ತಾರೆ ಎಂಬ ವಿಶ್ವಾಸವಿದೆಯೇ ಎಂದು ಶಾಸಕ ಹಾಗೂ ಬಿಜೆಪಿ ಮುಖಂಡ ಉಮಾನಾಥ ಕೋಟ್ಯಾನ್ ಪ್ರಶ್ನಿಸಿದ್ದಾರೆ.
ಮಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಮುಲ್ಕಿಯಲ್ಲಿ ನಾನು ಹೇಳಿಕೆ ಕೊಟ್ಟಿದ್ದು, ಬಿಲ್ಲವ ರಾಷ್ಟ್ರೀಯ ಸಮಾವೇಶದಲ್ಲಿ, ಅಲ್ಲಿ ಜಾತಿ ವಿಷಯ ಮಾತನಾಡಬೇಕಾಗಿದ್ದು ನನ್ನ ಕರ್ತವ್ಯ, ನಾನು ಸಮಾಜದ ಒಬ್ಬ ಪ್ರತಿನಿಧಿಯಾಗಿ ಅಲ್ಲಿ ಮಾತನಾಡಿದ್ದೇನೆ. ಇಲ್ಲಿ ನಾನು ಮಾತನಾಡಬೇಕಿರುವುದು ಬಿಜೆಪಿಯ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ, ಶಿಸ್ತಿನ ಸಿಪಾಯಿಯಾಗಿ, ಆರ್.ಎಸ್.ಎಸ್ ನ ಸ್ವಯಂ ಸೇವಕನಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿದರು.
ನಳಿನ್ ಅವರು ಪ್ರಥಮ ಬಾರಿಗೆ ಲೋಕಸಭೆಗೆ ಸ್ಪರ್ಧಿಸಿದಾಗ ಜಿಲ್ಲೆಯಲ್ಲಿ ಅವರ ಬಗ್ಗೆ ಪಕ್ಷದ ಕಾರ್ಯಕರ್ತರಿಗೆ, ಪದಾಧಿಕಾರಿಗಳಿಗೆ ಬಿಟ್ಟು ಮತದಾರನಿಗೆ ಪರಿಚಯ ಇರಲಿಲ್ಲ. ಚುನಾವಣೆ ಸಂದರ್ಭ ಪ್ರಥಮ ಹಿಂದೂ ಸಮಾಜೋತ್ಸವ ಆದಾಗ ʼಇವರು ನಳಿನ್ ಕುಮಾರ್ ಕಟೀಲ್ ನಮ್ಮ ಅಭ್ಯರ್ಥಿʼ ಎಂದು ಹೇಳಿಕೊಂಡು ನಳಿನ್ ಕುಮಾರ್ ಕಟೀಲ್ ಕೈ ಹಿಡಿದು ಒಂದು ಸುತ್ತು ಬಂದಿದ್ದೇನೆ. ಮೂರು ದಶಕಗಳಿಂದ ಈ ಕ್ಷೇತ್ರದ ಜನ ದೇಶಕ್ಕಾಗಿ ಮತ ಚಲಾಯಿಸಿದ್ದಾರೆ. ಈ ಬಾರಿ ಅತೀ ಹೆಚ್ಚು ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ ಎಂದರು.