
ಉಡುಪಿ : ರಾಷ್ಟ್ರೀಕೃತ ಬ್ಯಾಂಕಿನ ಸೀಲ್ ದುರ್ಬಳಕೆ ಮಾಡಿ ಉಡುಪಿ ನಗರಸಭೆಗೆ ಆಸ್ತಿ ತೆರಿಗೆ ಪಾವತಿ ಮಾಡಿದ ಹಣ ಪಡೆದು ವಂಚಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೆ.3ರಂದು ನಗರಸಭೆ ಕಚೇರಿಯಲ್ಲಿ ಸಿಬ್ಬಂದಿಗಳು ಆಸ್ತಿತೆರಿಗೆ ಪಾವತಿಯನ್ನು ತುಲನೆ ಮಾಡುತ್ತಿರುವಾಗ ಜ.28ರಂದು ಆಸ್ತಿತೆರಿಗೆ ಪಾವತಿ ಎಂದು ಚಲನ್ ಮೇಲೆ ಬ್ಯಾಂಕ್‌ನ ಸೀಲ್ ಇದ್ದು, ಆದರೆ ಅದೇ ದಿನಾಂಕದಲ್ಲಿ ಬ್ಯಾಂಕ್ ಪುಸ್ತಕದ ವಿವರ ಪಟ್ಟಿಯಲ್ಲಿ ಪಾವತಿ ಆಗಿರುವ ಬಗ್ಗೆ ನಮೂದು ಇರಲಿಲ್ಲ. ಇದನ್ನು ಕಂಡು ಸಿಬ್ಬಂದಿ ಪೌರಾಯುಕ್ತರ ಗಮನಕ್ಕೆ ತಂದರು.
ಫೆ.4ರಂದು ಮತ್ತೆ ಬ್ಯಾಂಕ್ ಸೀಲ್ ಹೊಂದಿದ ಚಲನ್‌ಗಳನ್ನು ಪರಿಶೀಲನೆ ನಡೆಸಿದಾಗ ಅವುಗಳಲ್ಲಿ ಈಗಾಗಲೇ ಜ.28ರಂದು ಜನರೇಟ್ ಆಗಿದ್ದ ಚಲನ್ ಸಂಖ್ಯೆ ಆಗಿತ್ತು. ಒಂದೇ ಚಲನ್ ಸಂಖ್ಯೆಗೆ ಎರಡು ಬೇರೆ ಬೇರೆ ದಿನಾಂಕ ಗಳಲ್ಲಿ ಬ್ಯಾಂಕ್ ಸೀಲ್ ಉಳ್ಳ ಚಲನ್‌ಗಳು ದೊರೆತಿವೆ. ಆರೋಪಿಗಳು ಬ್ಯಾಂಕ್‌ನ ಸೀಲ್‌ನ್ನು ದುರ್ಬಳಕೆ ಮಾಡಿ ಆಸ್ತಿ ತೆರಿಗೆ ಪಾವತಿ ಮಾಡಿದ ಹಣವನ್ನು ಪಡೆದು ಮೋಸ ವಂಚನೆ ಮಾಡಿರುವುದಾಗಿ ಪೌರಾಯುಕ್ತ ಮಹಾಂತೇಶ್ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
