ಕಾರ್ಕಳ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವನ್ಯಜೀವಿ ಭೇಟೆಗೆ ಮುಂದಾಗಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾರ್ಕಳ ತಾಲೂಕಿನ ಕುದುರೆಮುಖ ವನ್ಯಜೀವಿ ವಿಭಾಗದ ಮಾಳ ಗ್ರಾಮದ ಮುಳ್ಳೂರು ಅರಣ್ಯ ತನಿಖಾ ಠಾಣೆ ವ್ಯಾಪ್ತಿಯಲ್ಲಿ ಐದಾರು ಮಂದಿ ಕಾರಿನಲ್ಲಿ ಬಂದೂಕುಗಳೊಂದಿಗೆ ಬೇಟೆಗೆ ಹೊಂಚು ಹಾಕುತ್ತಿದ್ದು, ಈ ವೇಳೆ ಕಾರ್ಕಳ ವನ್ಯಜೀವಿ ವಲಯದ ಅರಣ್ಯಾಧಿಕಾರಿಗಳ ತಂಡ ದಾಳಿ ನಡೆಸಿದೆ. ಮಂಗಳೂರು ಕಾಟಿಪಳ್ಳ ನಿವಾಸಿ ಪಾಸ್ವಿಮ್ ಆಲಿ (35) ಎಂಬಾತನನ್ನು ಬಂಧಿಸಲಾಗಿದ್ದು, ಉಳಿದವರು ಕಾರಿನಲ್ಲಿ ಪರಾರಿಯಾಗಿದ್ದಾರೆ.
ಕುದುರೆಮುಖ ವನ್ಯಜೀವಿ ವಿಭಾಗದ ಡಿಎಫ್ಒ ಶಿವರಾಮ ಬಾಬು ನಿರ್ದೇಶನದಂತೆ, ಎಸಿಎಫ್ ಸತೀಶ್ ಎನ್. ಅವರ ಮಾರ್ಗದರ್ಶನದಲ್ಲಿ ಕಾರ್ಕಳ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಶಶಿಧರ ಗೌಡ ಪಾಟೀಲ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಬಂಧಿತ ಪಾಸ್ವಿಮ್ ಆಲಿ ಶಂಕರನಾರಾಯಣ ವಲಯ ವ್ಯಾಪ್ತಿಯಲ್ಲಿ ಎರಡು ಕಾಡುಕೋಣಗಳ ಬೇಟೆಯಾಡಿದ ಪ್ರಕರಣದ ಆರೋಪಿಯಾಗಿದ್ದಾನೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದು, ವನ್ಯಜೀವಿ ಹತ್ಯೆಗೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ ಕೇಸು ದಾಖಲಿಸಲಾಗಿದೆ.