ಉಡುಪಿ: ಸರಕಾರೀಕರಣಗೊಂಡ ದೇವಸ್ಥಾನಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪೂಜೆ ಇತ್ಯಾದಿಗಳ ಸಂದರ್ಭದಲ್ಲಿ ಪಾರಂಪರಿಕ ಪದ್ಧತಿಗಳು ಪಾಲನೆಯಾಗುವುದಿಲ್ಲ. ಹಾಗಾಗಿ ಯಾವುದೇ ದೇವಸ್ಥಾನಗಳು ಸರಕಾರೀಕರಣಕ್ಕೊಳಗಾಗಲು ಬಿಡಬಾರದು. ಎಲ್ಲರೂ ಒಟ್ಟಾದರೆ ದೇವಸ್ಥಾನವನ್ನು ಸರಕಾರದ ಮುಷ್ಟಿಯಿಂದ ಹೊರ ತರಲು ಸಾಧ್ಯ ಎಂದು ಉಡುಪಿ ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು ಕರೆ ನೀಡಿದರು. ಅವರು ನಗರದ ಕಿದಿಯೂರು ಹೋಟೆಲಿನ ಮಾಧವ ಕೃಷ್ಣ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಪರಿಷತ್ತಿನಲ್ಲಿ ಸುಮಾರು 160 ಕ್ಕೂ ಹೆಚ್ಚು ದೇವಸ್ಥಾನದ ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಪರಿಷತ್ತನ್ನು ‘ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.