ಬೆಳ್ತಂಗಡಿ: ಆಟೋರಿಕ್ಷಾದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸ್) ಎಫ್ಟಿಎಸ್‌ಸಿ 1 ನ್ಯಾಯಾಲಯದ ನ್ಯಾಯಾಧೀಶರಾದ ಡಿ. ವಿನಯ್ ಅವರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇಳಂತಿಲ ಗ್ರಾಮದ ನಿವಾಸಿ ಅಬ್ದುಲ್ ಕರೀಂ (39) ಹಾಗೂ ಮೊಗ್ರು ಗ್ರಾಮದ ಅಟೋ ಚಾಲಕ ಸಾಧಿಕ್ (34) ಶಿಕ್ಷೆಗೆ ಒಳಗಾದವರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು 2023ರ ಜೂನ್ 18ರಂದು ಬಂದಾರು ಗ್ರಾಮದ ನೇಲೋಳ್ಪಲ್ಕೆ ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಂಟಾಲ ಎಂಬಲ್ಲಿಗೆ ತಲುಪುವ ವೇಳೆ ಅಟೋರಿಕ್ಷದಲ್ಲಿ ಬಂದ ಆರೋಪಿಗಳು ರಿಕ್ಷಾವನ್ನು ನಿಲ್ಲಿಸಿದ್ದು ಆಕೆಯೂ ರಿಕ್ಷಾದಲ್ಲಿ ಹತ್ತಿದ್ದಾಳೆ. ರಿಕ್ಷಾದಲ್ಲಿ ತೆರಳುವ ವೇಳೆ ರಿಕ್ಷಾದಲ್ಲಿದ್ದ ಕರೀಂ ಎಂಬಾತ ಆಕೆಯ ಮೈಮೇಲೆ ಕೂಹಾಕಿ ದೌರ್ಜನ್ಯ ನಡೆಸಿದ್ದಾನೆ, ಈ ವೇಳೆ ಭಯಗೊಂಡ ಬಾಲಕಿ ರಿಕ್ಷಾದಿಂದ ಹಾರಿದ್ದಾಳೆ ರಸ್ತೆಗೆ ಬಿದ್ದ ಬಾಲಕಿ ಗಾಯಗೊಂಡಿದ್ದಳು ಈ ವೇಳೆ ರಿಕ್ಷಾ ನಿಲ್ಲಿಸದೆ ಪರಾರಿಯಾಗಿದ್ದರು.
ಈ ಬಗ್ಗೆ ಬಾಲಕಿಯ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರೇ ನಡೆಸಿದ ನ್ಯಾಯಾಲಯವು ಒಂದನೇ ಆರೋಪಿ ಅಬ್ದುಲ್ ಕರೀಂಗೆ ಪೋಕೋ ಕಾಯ್ದೆಯ ಕಲಂ 8ರ ಅಡಿಯಲ್ಲಿ 5 ವರ್ಷಗಳ ಜೈಲು ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯ ಕಲಂ 3(1)(ಡಬ್ಲ್ಯು)(ಐ) ಅಡಿಯಲ್ಲಿ 5 ವರ್ಷ ಸಾದಾ ಸಜೆ ಮತ್ತು 5,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ, ಅಲ್ಲದೆ ಪರಿಶಿಷ್ಟ ಜಾತಿ. ಪಂಗಡದವರ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(2)(ವಿಎ) ಮತ್ತು ಭಾರತೀಯ ದಂಡ ಸಂಹಿತೆ ಕಲಂ 354ಎ(1)(ಐ) ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.
ಇನ್ನೋರ್ವ ಆರೋಪಿ ಸಾದಿಕ್‌ಗೆ ಪೋಕೋ ಕಾಯ್ದೆಯ ಕಲಂ 8ರಡಿಯಲ್ಲಿ 3 ವರ್ಷಗಳ ಜೈಲು ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ ವಿಧಿಸಿ ಆದೇಶ ನೀಡಿದ್ದಾರೆ.