ಕಾರ್ಕಳ: ಬೈಲೂರು ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಮೂರ್ತಿ ನಿರ್ಮಾಣ ಮಾಡಿರುವ ಕೃಷ್ ಆರ್ಟ್ ವಲ್ಡ್‌ನ ಶಿಲ್ಪಿ ಕೃಷ್ಣ ನಾಯ್ಕ್‌ಗೆ ಜಾಮೀನು ಮಂಜೂರು ಆಗಿದೆ. ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಶಿಲ್ಪಿ ಕೃಷ್ಣ ನಾಯ್ಕ್‌ಗೆ ಡಿಸೆಂಬರ್ 7ರಂದು ಜಾಮೀನು ಮಂಜೂರುಗೋಳಿಸಿದೆ.
ಬೈಲೂರು ಪರಶುರಾಮ ಥೀಮ್ ಪಾರ್ಕಿನಲ್ಲಿ ನಿರ್ಮಿಸಿದ ಮೂರ್ತಿಯ ವಿಚಾರದಲ್ಲಿ ಕೃಷ್ಣ ಶೆಟ್ಟಿ ಬಜಗೋಳಿಯವರು ಶಿಲ್ಪಿ ವಿರುದ್ಧ ದೂರು ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ನವೆಂಬರ್ 4 ರಂದು ವಿಚಾರಣೆ ನಡೆದಿತ್ತು. ನಾಯಾಧೀಶರು ವಾದ ಪ್ರತಿವಾದವನ್ನು ಆಲಿಸಿ ನಿರೀಕ್ಷಣಾ ಜಾಮೀನನ್ನು ನವೆಂಬರ್ 7ಕ್ಕೆ ಕಾಯ್ದಿರಿಸಿದ್ದರು. ಆದರೆ ನ. 7ರಂದು ಕಾಯ್ದಿರಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯು ತಿರಸ್ಕಾರವಾಗಿತ್ತು.
ಇದರಿಂದ ಕಾರ್ಕಳ ನಗರ ಪೊಲೀಸರು ನ. 10ರಂದು ಶಿಲ್ಪಿಯನ್ನು ಕೇರಳದಲ್ಲಿ ಬಂಧಿಸಿ ನವೆಂಬರ್ 11ಕ್ಕೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪೊಲೀಸರು ಹೆಚ್ಚಿನ ತನಿಖೆಗೆ ಶಿಲ್ಪಿಯನ್ನು 7 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದರು. ನಂತರ ನವೆಂಬರ್ 15ರಂದು ಪೊಲೀಸರು ಕ್ರಷ್ಣ ನಾಯ್ಕ್‌ರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಕೃಷ್ಣ ನಾಯ್ಕ್ ಪರ ವಕೀಲರು ಜಾಮೀನಿಗಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಡಿಸೆಂಬರ್ 7ರಂದು ನ್ಯಾಯಾಲಯವು ಕೃಷ್ಣನಾಯಕ್ ಅವರಿಗೆ 1ಲಕ್ಷ ವೈಯಕ್ತಿಕ ಬಾಂಡ್, ಇಬ್ಬರು ಶ್ಯೂರಿಟಿಯೊಂದಿಗೆ ಹಾಗೂ ಹಲವಾರು ಷರತ್ತುಗಳೊಂದಿಗೆ ಜಾಮೀನು ಮಂಜೂರುಗೊಳಿಸಿದೆ. ಆರೋಪಿ ಪರ ಮಟ್ಟಾರು ರತ್ನಾಕರ ಹೆಗ್ಡೆ ವಾದಿಸಿದ್ದರು.