ಕಾರ್ಕಳ: ಕ್ರೇನ್ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಕಾರ್ಕಳ ನಗರ ಠಾಣೆಯ ವ್ಯಾಪ್ತಿಯ ಅಯ್ಯಪ್ಪ ನಗರ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.
ಅಂಗಾರ(75) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಂಗಾರ ಕುಕ್ಕುಂದೂರು ಅಯ್ಯಪ್ಪ ನಗರದಿಂದ ಕುಕ್ಕುಂದೂರು ಜಲದುರ್ಗದ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಕಾರ್ಕಳ ಜೋಡುರಸ್ತೆಯಿಂದ ಅಯ್ಯಪ್ಪ ನಗರದ ಕಡೆಗೆ ಹೋಗುತ್ತಿದ್ದ ಕ್ರೇನ್ ಅಂಗಾರರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಕಾರ್ಕಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.