ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಕ್ಕೊಳಪಟ್ಟ ಸುಬ್ರಹ್ಮಣ್ಯದ ಅಭಯ ಆಂಜನೇಯ ದೇವಸ್ಥಾನದಿಂದ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಧಾರವಾಡ ಮೂಲದ ವೀರಣ್ಣ ಗೌಡ (26) ಎಂದು ತಿಳಿಯಲಾಗಿದೆ.
ನ. 3ರಂದು ರಾತ್ರಿ ಅಭಯ ಆಂಜನೇಯ ದೇವಸ್ಥಾನದಿಂದ ಪೂಜಾ ಸೊತ್ತುಗಳು ಹಾಗೂ ಸಿಸಿ ಕೆಮರಾದ ಸೊತ್ತುಗಳು ಕಳ್ಳತನ ಆಗಿತ್ತು. ಕುಕ್ಕೆ ದೇವಳದ ಕಾರ್ಯನಿರ್ವಹಣಾಧಿಕಾರಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡ ಸುಬ್ರಹ್ಮಣ್ಯ ಪೊಲೀಸರು ತನಿಖೆ ನಡೆಸಿ ಸಿಸಿ ಕೆಮರಾದ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ದೇಗುಲದ ಪಾರ್ಕಿಂಗ್ ಜಾಗದಲ್ಲಿ ಸುತ್ತಾಡುತ್ತಿದ್ದ ಆರೋಪಿಯನ್ನು ಸುಬ್ರಹ್ಮಣ್ಯ ಪೊಲೀಸರು ಪತ್ತೆ ಹಚ್ಚಿ, ವಿಚಾರಣೆ ನಡೆಸಿ, ಕಳವು ನಡೆಸಿದ ಸೊತ್ತುಗಳನ್ನು ಬೇರೊಂದು ಕಡೆ ಮೂಟೆ ಕಟ್ಟಿ ಇರಿಸಲಾಗಿದ್ದಲ್ಲಿಂದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿಯಲಾಗಿದೆ.
ಸುಳ್ಯ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಎಸ್ಸೆ„ ಕಾರ್ತಿಕ್ ನೇತೃತ್ವದಲ್ಲಿ ಮಹೇಶ್ ಎಂ.ಕೆ., ಆಕಾಶ್, ನವೀನ್, ಸಂಧ್ಯಾ, ಮಹೇಶ್, ಸತೀಶ್, ಪರಮೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.