ಉಡುಪಿ:ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದವನಿಗೆ 10 ಸಾವಿರ ರೂ. ದಂಡ!
ಉಡುಪಿ: ಉಡುಪಿಯ ಇಂದ್ರಾಳಿ ವಾರ್ಡಿನ ಮಂಚಿ ಎಂಬಲ್ಲಿ ತ್ಯಾಜ್ಯವನ್ನು ಟ್ರ್ಯಾಕ್ಟರ್ ಮೂಲತ ತಂದು ಎಸೆದ ಗುತ್ತಿಗೆದಾರನಿಗೆ ನಗರಸಭೆ 10,000ರೂ. ದಂಡ ವಿಧಿಸಿದ್ದಲ್ಲದೇ, ಆತನಿಂದಲೇ ತ್ಯಾಜ್ಯವನ್ನು ತೆಗೆಸಿದೆ. ಹನುಮೇಶ ಎಂಬಾತ ತ್ಯಾಜ್ಯವನ್ನು ಸಂಗ್ರಹಿಸಿ ಇಂದ್ರಾಳಿ ವಾರ್ಡಿನ ಮಂಚಿ ಎಂಬಲ್ಲಿ ಹಾಕಿ ಬಂದಿದ್ದ.ಇದನ್ನು ಪತ್ತೆ ಮಾಡಿದ ನಗರಸಭೆಯ ಅಧಿಕಾರಿಗಳು ಹನುಮೇಶನಿಗೆ 10,000ರೂ. ದಂಡ ವಿಧಿಸಿದ್ದಲ್ಲದೇ ಆತನಿಂದಲೇ ಅದನ್ನು ತೆಗೆಸಿದ್ದಾರೆ. ಕಾರ್ಯಾಚರಣೆಯಲ್ಲಿ ನಗರಸಭೆಯ ಪರಿಸರ ಇಂಜಿನಿಯರ್, ಹಿರಿಯ ಆರೋಗ್ಯ ನಿರೀಕ್ಷಕರು, ಸ್ಯಾನಿಟರಿ ಸೂಪರ್‌ವೈಸರ್ ಹಾಗೂ ಪೌರಕಾರ್ಮಿಕರು ಭಾಗವಹಿಸಿದ್ದರು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಉದ್ದಿಮೆದಾರರು, ವ್ಯಾಪಾರಿಗಳು ತ್ಯಾಜ್ಯವನ್ನು ಕಂಡ ಕಂಡಲ್ಲಿ ಎಸೆಯದೇ, ನಗರಸಭೆಯ ವಾಹನಕ್ಕೆ ನೀಡುವಂತೆ ಕೋರಲಾಗಿದೆ. ತಪ್ಪಿದಲ್ಲಿ ತ್ಯಾಜ್ಯ ಎಸೆದವರ ಮೇಲೆ 25,000ರೂ. ದಂಡ ವಿಧಿಸಿ, ಕಾನೂನು ಕ್ರಮ ಜರಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಎಚ್ಚರಿಕೆ ನೀಡಿದ್ದಾರೆ.