ಮಂಗಳೂರು ( ಅಮೆರಿಕಾ ) :“ಇದು ಕೋವಿಡ್‌ಗಿಂತ ನೂರು ಪಟ್ಟು ಕೆಟ್ಟದಾಗಿದೆ ಮತ್ತು ಸೋಂಕಿತರಲ್ಲಿ ಅರ್ಧದಷ್ಟು ಜನ ಸಾವಿಗೀಡಾಗುವ ಸಂಭವ ಇದೆ.” ಹೀಗಂತ ಮಾರಣಾಂತಿಕ ಸೋಂಕೊಂದರ ಬಗ್ಗೆ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಯುಕೆ ಮೂಲದ ‘ಟ್ಯಾಬ್ಲಾಯ್ಡ್ ಡೈಲಿ ಮೇಲ್’ ವರದಿ ಮಾಡಿದ್ದು, ಈ ವಿಚಾರವನ್ನು ಇತ್ತೀಚೆಗೆ ಸಂಶೋಧಕರು ನಡೆಸಿದ H5N1ಕುರಿತಾದ ಚರ್ಚೆಯಲ್ಲಿ ಎತ್ತಲಾಗಿದೆ. ಸಂಶೋಧಕರು ಭೀಕರವಾದ ಪರಿಣಾಮ ಬೀರಬಲ್ಲ ಅಂತಹ ಒಂದು ಸೋಂಕಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಡೈಲಿ ಮೇಲ್ ವರದಿ ಪ್ರಕಾರ ಈ ವೈರಸ್ ಜಾಗತಿಕ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ನಿರ್ಣಾಯಕ ಮಿತಿಯನ್ನು ಸಮೀಪಿಸುತ್ತಿದೆ ಎಂದು ಸಂಶೋಧಕರು ಆತಂಕ ವ್ಯಕ್ತಪಡಿಸಿರುವ ವಿಚಾರವನ್ನು ಪ್ರಸ್ತಾಪಿಸಿದೆ.
ಚರ್ಚೆಯಲ್ಲಿ ಭಾಗವಹಿಸಿದ್ದ ಸಂಶೋಧಕರ ಸಭೆಯಲ್ಲಿ ಮಾತನಾಡಿದ ಪಿಟ್ಸ್‌ಬರ್ಗ್‌ನ ಪ್ರಮುಖ ಪಕ್ಷಿ ಜ್ವರ ಸಂಶೋಧಕರಾದ ಡಾ.ಸುರೇಶ್ ಕೂಚಿಪುಡಿ “H5N1ಸಾಂಕ್ರಾಮಿಕ ರೋಗವನ್ನು ಉಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಪಾಯಕಾರಿಯಾಗಿರುವ ಈ ಸಾಂಕ್ರಮಿಕ ವೈರಸ್ ರೋಗಕ್ಕೆ ಜಗತ್ತು ಅಪಾಯಕಾರಿಯಾಗಿ ಹತ್ತಿರವಾಗುತ್ತಿದೆ” ಎಂದು ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿಸಿದ ಡಾ.ಸುರೇಶ್ ಕೂಚಿಪುಡಿ “ ನಾವು ಹೊಸ ವೈರಸ್ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಈಗಾಗಲೇ ಜಾಗತಿಕವಾಗಿ ಹರಡಿರುವ ವೈರಸ್ ಬಗ್ಗೆ ಮಾತನಾಡುತ್ತಿದ್ದೇವೆ. ಈಗಾಗಲೆ ಈ ವೈರಸ್ ಸಸ್ತನಿಗಳಿಗೆ ಸೋಂಕನ್ನು ಹರಡಿದ್ದು, ಇದು ಇನ್ನಷ್ಟು ಹರಡುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ” ಎಂದು ಹೇಳಿದ್ದಾರೆ.
ಡಾ.ಸುರೇಶ್ ಕೂಚಿಪುಡಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಕೆನಡಾ ಮೂಲದ Bio Niagara ಔಷಧಿ ಕಂಪೆನಿಯ ಸಂಸ್ಥಾಪಕ ಜಾನ್ ಪುಲ್ಟನ್ ಅವರು H5N1 ಸಾಂಕ್ರಾಮಿಕ ರೋಗ ತೀವೃತೆಯನ್ನು ಪಡೆದುಕೊಂಡಿದ್ದು, ಇದು ಕೋವಿಡ್ ಗಿಂತಲೂ ಹೆಚ್ಚು ಮಾರಕವಾಗಬಹುದು ಎಂದು ಎಚ್ಚರಿಸಿದ್ದಾರೆ.
ಸೋಂಕಿನ ಪರಿಣಾಮ ಏನು..?
“ಇದು ಕೋವಿಡ್‌ಗಿಂತ 100 ಪಟ್ಟು ಕೆಟ್ಟದಾಗಿ ಪರಿಣಾಮ ಬೀರಬಹುದು, ಅಥವಾ ಅದು ರೂಪಾಂತರಗೊಂಡು ಸಾವಿನ ಪ್ರಮಾಣವನ್ನು ಹೆಚ್ಚಿಸಿಕೊಳ್ಳಬಹುದು. ಅದೇ ರೀತಿ ಮನುಷ್ಯನಿಗೆ ಈ ಸೋಂಕು ತಗುಲಿದರೆ ಪರಿಣಾಮ ಕಡಿಮೆ ಆದರೂ ಆಗಬಹುದು “ ಎಂದು ಪುಲ್ಚಾನ್ ಹೇಳಿದ್ದಾರೆ.
ಈ H5N1ಜ್ವರದ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (WHO) ಮಾಹಿತಿ ನೀಡಿದ್ದು, ಈ ಸೋಂಕಿನಿಂದ 2003 ರಿಂದ ಸಾವುಗಳು ಸಂಭವಿಸಿದೆ. ಪ್ರತಿ 100 ಜನ ಸೋಂಕಿತರಲ್ಲಿ 52 ಜನ ಸಾವಿಗೀಡಾಗಿದ್ದಾರೆ. 2003 ರಿಂದ ಇಲ್ಲಿವರಗೆ 882 ಪ್ರಕರಣಗಳು ದಾಖಲಾಗಿದ್ದು, 462 ಸಾವುಗಳು ಈ ಸೋಂಕಿನಿಂದ ಆಗಿದೆ. ಅದೇ ಕೋವಿಡ್ ಪ್ರಕರಣದಲ್ಲಿ ಸಾವಿನ ಪ್ರಮಾಣ ವ್ಯತಿರಿಕ್ತವಾಗಿದ್ದು, ಸಾವಿನ ಪ್ರಮಾಣವು ಶೇಕಡಾ 0.1 ಕ್ಕಿಂತ ಕಡಿಮೆಯಿದೆ. ಆದಾಗ್ಯೂ, ಸಾಂಕ್ರಾಮಿಕ ರೋಗದ ಪ್ರಾರಂಭದಲ್ಲಿ, ಇದು ಸುಮಾರು 20 ಪ್ರತಿಶತದಷ್ಟಿತ್ತು.
ಹಕ್ಕಿಯಿಂದ ಹಸುವಿಗೆ … ಹಸುವಿಂದ ಮನುಷ್ಯನಿಗೆ ಹರಡಿದ ಸೋಂಕು
ಮಿಚಿಗನ್ ನಲ್ಲಿ ಹಕ್ಕಿ ಜ್ವರ ಮನುಷ್ಯನಿಗೆ ತಗುಲಿದ ಮೊದಲ ಪ್ರಕರಣ ವರದಿಯಾಗಿದೆ. ಮಿಚಿಗನ್ ಕೋಳಿ ಫಾರ್ಮ್ ಮತ್ತು ಯುಎಸ್‌ನ ಟೆಕ್ಸಾಸ್‌ನಲ್ಲಿ ಮೊಟ್ಟೆ ಉತ್ಪಾದಕ ಘಟಕದಲ್ಲಿ ಈ ಪ್ರಕರಣ ದಾಖಲಾಗಿದೆ. ಹಕ್ಕಿ ಜ್ವರ ಹಸುವಿಗೆ ತಗುಲಿದ್ದು ಹಸುವಿನ ಸಂಪರ್ಕ ಹೊಂದಿದ್ದ ವ್ಯಕ್ತಿಯೊಬ್ಬನಿಗೆ ಈ ಸೋಂಕು ಹರಡಿದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಟೆಕ್ಸಾಸ್‌ನ ಡೈರಿ ಫಾರ್ಮ್ ಕೆಲಸಗಾರರಲ್ಲಿ H5N1 ಸೋಂಕನ್ನು ದೃಢಪಟ್ಟಿದೆ. ಅಮೆರಿಕಾದ ಶ್ವೇತಭವನವು ಈ ಬೆಳವಣಿಗೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಸೋಂಕಿನ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ.
ಈ ಹಿಂದೆ 2022 ರಲ್ಲಿ ಕೊಲೊರಾಡೋದಲ್ಲಿ ಹಕ್ಕಿ ಜ್ವರ ಕೋಳಿಯಿಂದ ನೇರವಾಗಿ ಮನುಷ್ಯನಿಗೆ ಹರಡಿದ ಪ್ರಕರಣವ ವರದಿಯಾಗಿತ್ತು. ಈ ಸಂದರ್ಭದಲ್ಲಿ ಎಲ್ಲಾ ಕೋಳಿಗಳನ್ನು ಕೊಲ್ಲುವ ಮೂಲಕ ಸೋಂಕು ನಿಯಂತ್ರಣ ಮಾಡಲಾಗಿತ್ತು.
ಅಮೆರಿಕಾದ ಐದು ರಾಜ್ಯಗಳಾದ ಇದಾಹೋ, ಕಾನ್ಸಸ್ , ಮಿಚಿಗನ್, ನ್ಯೂ ಮೆಕ್ಸಿಕೊ ಮತ್ತು ಟೆಕ್ಸಾಸ್ ನ ಡೈರಿಗಳಲ್ಲಿ ಈ ಸೋಂಕು ವ್ಯಾಪಕವಾಗ ಹರಡಿದೆ ಎನ್ನಲಾಗಿದೆ. ಈ ಸೋಂಕಿನಿಂದ ಮನುಷ್ಯರಿಗೆ ಏನೂ ಹಾನಿ ಆಗಲಾರದು ಎಂದು ಯುಎಸ್ ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ. ಆದ್ರೆ ಅಮೆರಿಕಾದಲ್ಲಿ ತಾಜಾ ಮೊಟ್ಟೆಗಳ ಅತಿದೊಡ್ಡ ಉತ್ಪಾದಕರಿಗೆ ಈ ಸೋಂಕಿನಿಂದ ಆತಂಕ ಶುರುವಾಗಿದೆ.
H5N1 ಎಂದರೇನು?
ಲೈವ್ ಸೈನ್ಸ್‌ನ ವರದಿಯ ಪ್ರಕಾರ, H5N1 ಹಕ್ಕಿ ಜ್ವರದ ಒಂದು ಉಪವಿಭಾಗವಾಗಿದ್ದು, ಸಂಬಂಧಿತ ಪಕ್ಷಿ ಜ್ವರ ವೈರಸ್‌ಗಳ ಗುಂಪಾಗಿದೆ. ಇದು ಹೆಚ್ಚು ರೋಗಕಾರಕವೆಂದು ಪರಿಗಣಿಸಲಾಗಿದೆ ಏಕೆಂದರೆ ಇದು ಕೋಳಿಗಳಲ್ಲಿ ತೀವ್ರವಾದ ಮತ್ತು ಆಗಾಗ್ಗೆ ಮಾರಣಾಂತಿಕ ಅನಾರೋಗ್ಯವನ್ನು ಉಂಟುಮಾಡುತ್ತದೆ. ಇದು ಮುಖ್ಯವಾಗಿ ಪಕ್ಷಿಗಳ ಮೇಲೆ ಪರಿಣಾಮ ಬೀರುತ್ತದೆಯಾದರೂ, H5N1 ಕಾಡು ಪಕ್ಷಿಗಳು ಮತ್ತು ಸಾಂದರ್ಭಿಕವಾಗಿ ಮನುಷ್ಯರನ್ನು ಒಳಗೊಂಡಂತೆ ಸಸ್ತನಿಗಳಿಗೆ ಸಹ ಸೋಂಕು ತರುತ್ತದೆ. ಪಕ್ಷಿಯಲ್ಲದ ಜಾತಿಗಳಲ್ಲಿ, ರೋಗವು ಮಾರಕವಾಗಬಹುದು, ಆದರೆ ಕೆಲವು ಸಂದರ್ಭಗಳಲ್ಲಿ ಸೌಮ್ಯವಾಗಿರಬಹುದು ಅಥವಾ ಯಾವುದೇ ರೋಗಲಕ್ಷಣಗಳನ್ನು ತೋರಿಸದೇ ಇರಬಹುದು. H5N1 ವೈರಸ್‌ನ ಮೊದಲ ಪತ್ತೆ 1996 ರಲ್ಲಿ ಚೀನಾದಲ್ಲಿನ ಪಕ್ಷಿಗಳಲ್ಲಿ ವರದಿಯಾಗಿದೆ. ಒಂದು ವರ್ಷದ ನಂತರ, ಹಾಂಗ್ ಕಾಂಗ್‌ನಲ್ಲಿ ಕಾಣಿಸಿಕೊಂಡ ಈ ಸೋಂಕು ಪಕ್ಷಿಯಿಂದ ನೇರವಾಗಿ ಮನುಷ್ಯರಿಗೆ ಹರಡಿತ್ತು. ಈ ಸಂದರ್ಭದಲ್ಲಿ 18 ಪ್ರಕರಣಗಳಲ್ಲಿ 6 ಜನರ ಸಾವು ಸಂಭವಿಸಿತ್ತು