

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ನಿನ್ನೆ ಬಿಜೆಪಿ ವತಿಯಿಂದ ಹೊಸ ಆಟೋ ರಿಕ್ಷಾ ಹಾಗೂ 5 ಲಕ್ಷ ರೂಪಾಯಿ ನೆರವನ್ನು ನೀಡಲಾಯಿತು. ನಿನ್ನೆ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಮನೆಯಲ್ಲಿ ನಡೆದಂತ ಸರಳ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೊಸ ರಿಕ್ಷಾ, 5 ಲಕ್ಷ ರೂ ಗಳ ಚೆಕ್ ಅನ್ನು ಹಸ್ತಾಂತರಿಸಿದರು. ನವೆಂಬರ್ 19, 2022ರಂದು ಮಂಗಳೂರಿನ ನರೋಡಿ ಬಳಿಯಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಶಂಕಿತ ಉಗ್ರ ಶಾರೀಕ್ ಸೇರಿದಂತೆ ಆಟೋ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಗಾಯಗೊಂಡಿದ್ದರು. ಎರಡು ತಿಂಗಳ ಹಿಂದೆ ಗುಣಮುಖರಾಗಿ ಆಸ್ಪತ್ರೆಯಿಂದ ಆಟೋರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಡಿಸ್ಚಾರ್ಜ್ ಆಗಿದ್ದರು. ಅವರ ಮನೆಗೆ ಭೇಟಿ ನೀಡಿದ್ದಂತ ಶಾಸಕ ವೇದವ್ಯಾಸ ಕಾಮತ್ ವೈಯಕ್ತಿಕವಾಗಿ ಹೊಸ ಆಟೋ ರಿಕ್ಷಾ ಕೊಡಿಸುವುದಾಗಿ ತಿಳಿಸಿದ್ದರು. ಅದರಂತೆ ನಿನ್ನೆ ಹೊಸ ರಿಕ್ಷಾ ನೀಡಲಾಗಿದೆ. ಅಲ್ಲದೇ ಬಿಜೆಪಿ ಪಕ್ಷದ ವತಿಯಿಂದ 5 ಲಕ್ಷ ನೆರವನ್ನು ಹಸ್ತಾಂತರಿಸಲಾಗಿದೆ.