
ಕುಂದಾಪುರ: ಕಾರಿನ ಕಿಟಕಿ ಗಾಜು ಒಡೆದು ಡ್ಯಾಶ್‌ಬೋರ್ಡ್‌ನಲ್ಲಿದ್ದ 2 ಲಕ್ಷ ರೂ. ನಗದು ಹಣ ದೋಚಿ ಪರಾರಿಯಾದ ಘಟನೆ ಮಂಗಳವಾರ ಸಂಜೆ ತಾಲೂಕಿನ ತಲ್ಲೂರು ಎಂಬಲ್ಲಿ ನಡೆದಿದೆ.
ಕೆಂಚನೂರು ನಿವಾಸಿ ಗುತ್ತಿಗೆದಾರರಾಗಿರುವ ಗುಂಡು ಶೆಟ್ಟಿ ಎನ್ನುವರು ತಲ್ಲೂರಿನ ಬ್ಯಾಂಕ್‌ವೊಂದರಲ್ಲಿ 2 ಲಕ್ಷ ರೂ. ಹಣವನ್ನು ವಿತ್‌ಡ್ರಾ ಮಾಡಿ ಕಾರಿನೊಳಗಿಟ್ಟಿದ್ದು ಅನತಿ ದೂರದಲ್ಲಿರುವ ತಲ್ಲೂರು ಪೇಟೆ ಸಮೀಪದ ವಸತಿ ಸಂಕೀರ್ಣವೊಂದರ ಎದುರು ಕಾರು ನಿಲ್ಲಿಸಿ ಬಾಡಿಗೆ ಮನೆಗೆ ತೆರಳಿದ್ದರು. 10-15 ನಿಮಿಷ ಕಳೆದು ವಾಪಾಸ್ಸಾಗಿದ್ದು ಕಾರಿನಲ್ಲಿ ಕುಳಿತಾಗ ಬಲಗಡೆಯ ಕಿಟಕಿ ಗಾಜು ಒಡೆದಿದ್ದು ಡ್ಯಾಶ್‌ಬೋರ್ಡ್ ತೆರೆದಿದ್ದು ನಗದು ಇರಲಿಲ್ಲ. ಘಟನೆ ತಿಳಿದ ಕೂಡಲೇ ಸ್ಥಳೀಯರು ಜಮಾಯಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಲ್ಲೂರು ಜಂಕ್ಷನ್ ಸಮೀಪದ ಜನನಿಬೀಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ಎದುರುಗಡೆ ವಸತಿ ಸಮುಚ್ಚಯ, ಪಕ್ಕದಲ್ಲಿ ವಾಣಿಜ್ಯ ಸಂಕೀರ್ಣ, ಬಸ್, ಆಟೋ ನಿಲ್ದಾಣವಿದೆ. ಹಾಡುಹಗಲೇ ನಡೆದ ಈ ಕೃತ್ಯವು ಸಾರ್ವಜನಿಕರನ್ನು ಆತಂಕಕ್ಕೀಡು ಮಾಡಿದೆ. ಬ್ಯಾಂಕಿನಿಂದ ಹಣ ಡ್ರಾ ಮಾಡಿದ್ದು ಖಚಿತಪಡಿಸಿಕೊಂಡಿರುವ ಕಳ್ಳರು ಗುಂಡು ಶೆಟ್ಟಿಯವರ ಕಾರನ್ನು ಹಿಂಬಾಲಿಸಿ ಬಂದು ಕೃತ್ಯವೆಸಗಿದ್ದಾರೆ ಎಂಬ ಶಂಕೆಯೂ ವ್ಯಕ್ತವಾಗಿದೆ.
ಕುಂದಾಪುರ ಪಿಎಸ್ಐ ನಂಜಾ ನಾಯ್ಕ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದು ತನಿಖೆ ಮುಂದುವರೆಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
