ಉಳ್ಳಾಲ: ತುಳುನಾಡಿನ ಪುರಾಣ ಪ್ರಸಿದ್ಧ ಕೋಟೆಕಾರು ಗ್ರಾಮದ ಕಾರಣೀಕ ಕೊಂಡಾಣ ಕ್ಷೇತ್ರದಲ್ಲಿ ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಗಳಿಗೆ ಕ್ಷೇತ್ರಕ್ಕೆ ತಾಗಿಕೊಂಡೇ ನೂತನ ಭಂಡಾರಮನೆ ನಿರ್ಮಾಣಗೊಳ್ಳುತ್ತಿದ್ದು, ನಿರ್ಮಾಣ ಹಂತದ ಕಟ್ಟಡವನ್ನು ಕಿಡಿಗೇಡಿಗಳು ಭಾನುವಾರ ಬೆಳಿಗ್ಗೆ ಜೆಸಿಬಿಯಲ್ಲಿ ನೆಲಸಮಗೊಳಿಸಿದ ಘಟನೆ ನಡೆದಿದೆ.
ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಪುರಾಣದ ಭಂಡಾರಮನೆಯು ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದ್ದು, ಅದರಲ್ಲಿ ಕ್ಷೇತ್ರದ ದೈವಗಳ ಹದಿನೈದು ಕೋಟಿಗೂ ಮಿಕ್ಕಿ ಬೆಲೆ ಬಾಳುವ ಒಡವೆಗಳಿದ್ದು, ಭಂಡಾರಮನೆಯನ್ನು ಮುಜರಾಯಿ ಇಲಾಖೆಗೆ ಸೇರಿಸಲು ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್ ಅವರು ಶತಾಯಗತಾಯ ಪ್ರಯತ್ನಿಸಿದ್ದರು. ಆದರೆ, ಇದಕ್ಕೆ ಭಂಡಾರಮನೆಯವರು ಸಮ್ಮತಿ ನೀಡಿರಲಿಲ್ಲ. ಆ ಹಿನ್ನಲೆ ಕ್ಷೇತ್ರದ ದೈವಗಳಿಗೆ ಬೇರೆಯೇ ಭಂಡಾರಮನೆ ನಿರ್ಮಾಣವಾಗಬೇಕೆಂದು ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದ ಕಾರಣ, ಕ್ಷೇತ್ರಕ್ಕೆ ತಾಗಿಕೊಂಡ ಜಮೀನನ್ನು ವ್ಯವಸ್ಥಾಪನಾ ಸಮಿತಿಯವರು ಖರೀದಿಸಿದ್ದರು. ಆ ಜಾಗದಲ್ಲಿ ಕಳೆದ ಜನವರಿ 8 ರಂದು ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಮುಂದಾಳತ್ವದಲ್ಲಿ ನೂತನ ಭಂಡಾರ ಮನೆಗೆ ಶಿಲಾನ್ಯಾಸ ಮಾಡಲಾಗಿತ್ತು. ದಾನಿಗಳ ದೇಣಿಗೆಯಿಂದ ಭಂಡಾರ ಮನೆಯ ಎಂಭತ್ತು ಶೇಕಡಾ ಕಾಮಗಾರಿ ಸಂಪೂರ್ಣಗೊಂಡಿತ್ತು. ಈಗಿನ ವ್ಯವಸ್ಥಾಪನಾ ಸಮಿತಿಯ ಅಧಿಕಾರ ಅವಧಿ ಮುಗಿದಿದ್ದು, ಸಮಿತಿ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ತಾಮಾರ್ ಅವರು ಕಳೆದ ಎರಡು ದಿವಸಗಳ ಹಿಂದಷ್ಟೇ ಅಧಿಕಾರವನ್ನು ಇಲಾಖೆಗೆ ಹಸ್ತಾಂತರ ಮಾಡಿದ್ದರು.
ಇದೀಗ ಕೃಷ್ಣ ಶೆಟ್ಟಿ ಅಧ್ಯಕ್ಷ ಸ್ಥಾನದಿಂದ ಇಳಿಯುತ್ತಿದ್ದಂತೆ, ಭಾನುವಾರ ಬೆಳಿಗ್ಗೆ ಕಿಡಿಗೇಡಿಗಳು ಜೆಸಿಬಿಯಿಂದ ಏಕಾ ಏಕಿ ನಿರ್ಮಾಣ ಹಂತದ ಭಂಡಾರ ಮನೆಯನ್ನ ನೆಲಸಮ ಮಾಡಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ , ಎಸಿಪಿ ಧನ್ಯಾ ನಾಯಕ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಮತ್ತು ಸ್ಥಳೀಯರು ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.