ಮಂಗಳೂರು: 2016ರಲ್ಲಿ ನಡೆದ ಕೋಮುಗಲಭೆ ವೇಳೆ ಉಳ್ಳಾಲದಲ್ಲಿ ಕೊಲೆಯಾದ ರಾಜೇಶ್ ಕೋಟ್ಯಾನ್ ಅಲಿಯಾಸ್ ರಾಜ (44) ಅವರನ್ನು ಹತ್ಯೆ ಮಾಡಿದ ನಾಲ್ವರು ಅಪರಾಧಿಗಳಿಗೆ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು ತಲಾ ₹ 25 ಸಾವಿರ ದಂಡ ವಿಧಿಸಿದೆ.
ಉಳ್ಳಾಲ ಆಲದ ಮರದ ಬಳಿಯ ನಿವಾಸಿ, ಚಾಲಕ ಮೊಹಮ್ಮದ್ ಆಸಿಫ್ ಅಲಿಯಾಸ್ ಆಚಿ (23), ಉಳ್ಳಾಲ ಕೋಡಿಯ ನಿವಾಸಿ ಲೋಡರ್ ಮೊಹಮ್ಮದ್ ಸುಹೈಲ್ ಅಲಿಯಾಸ್ ಸುಹೈಲ್ (20), ಕೋಡಿ ಮಸೀದಿಯ ಬಳಿಯ ನಿವಾಸಿ, ಕೂಲಿ ಕಾರ್ಮಿಕ ಅಬ್ದುಲ್ ಮುತಾಲಿಕ್ ಅಲಿಯಾಸ್ ಮುತ್ತು (20), ಉಳ್ಳಾಲ ಬಸ್ತಿಪಡ್ಪು ಮಂಜಿಲ್ ನಿವಾಸಿ, ಕೋಳಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಬ್ದುಲ್ ಅಸ್ವೀರ್ ಅಲಿಯಾಸ್ ಅಚ್ಚು (19) ಶಿಕ್ಷೆಗೆ ಒಳಗಾದ ಅಪರಾಧಿಗಳು. ದಂಡದ ಮೊತ್ತ ₹ 1.20 ಲಕ್ಷವನ್ನು ಮೃತ ರಾಜೇಶ್ ಕೋಟ್ಯಾನ್ ಅವರ ಪತ್ನಿ ಸವಿತಾ ಅವರಿಗೆ ನೀಡಬೇಕು ಎಂದೂ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್. ಎಸ್. ಅವರು ಆದೇಶದಲ್ಲಿ ತಿಳಿಸಿದ್ದಾರೆ.