ಬಳಂಜ, ಎ. 16: ಇಂದು ಶಿಕ್ಷಣ ವ್ಯವಸ್ಥೆ ಸಂಪೂರ್ಣ ಬದಲಾಗಿದೆ. ಶೋಷಿತರು, ಬಡವರು ಮಾತ್ರ ಸರಕಾರಿ ಶಾಲೆಯನ್ನು ಅವಲಂಬಿಸುವುದು ಅನ್ನುವ ಮಾತು ಸುಳ್ಳಾಗಿದ್ದು, ಶ್ರೀಮಂತರ ಮಕ್ಕಳು ಸಹ ಇಂದು ಸರಕಾರಿ ಶಾಲೆಗಳನ್ನು ಅವಲಂಬಿಸುತ್ತಿದ್ದಾರೆ. ಇಂದು ಶಾಲೆಗಳು ಖಾಸಗಿ ಶಾಲೆಗಳಿಗೆ ಮೀರಿಸುವಷ್ಟು ಮೂಲ ಸೌಲಭ್ಯ ಇದೆ ಎಂದು ಕೆನರಾ ಬ್ಯಾಂಕ್ ಅದೀನಕ್ಕೊಳಪಟ್ಟ ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆಯ ಡಿಜಿಎಂ ಪ್ರಶಾಂತ್ ಜೋಶಿ ಹೇಳಿದರು.
ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸಂಸ್ಥೆ ಬೆಳ್ತಂಗಡಿ ಹಾಗೂ ರೋಟರಿ ಸಂಸ್ಥೆ ಇಂದಿರಾ ನಗರ ಬೆಂಗಳೂರು ಇವರ ಮಾರ್ಗದರ್ಶನದಲ್ಲಿ ಕೆನರಾ ಬ್ಯಾಂಕ್ ಅದೀನಕ್ಕೊಳಪಟ್ಟ ಕ್ಯಾನ್ ಫಿನ್ ಹೋಮ್ ಸಂಸ್ಥೆಯು ಕೊಡುಗೆಯಾಗಿ ನೀಡಿದ ರೂ. ೧೨ ಲಕ್ಷ ವೆಚ್ಚದ ಸೋಲಾರ್ ವ್ಯವಸ್ಥೆ, ತರಗತಿ ಕೊಠಡಿ ನವೀಕರಣ, ಆಡಿಟೋರಿಯಂ ಅನ್ನು ಉದ್ಘಾಟಿಸಿ ಮಾತನಾಡಿದರು.
ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ. ವಸಂತ ಸಾಲಿಯಾನ್ ಕಾಪಿನಡ್ಕ ಅದ್ಯಕ್ಷತೆ ವಹಿಸಿದ್ದರು. ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷೆ ಮನೋರಮಾ ಭಟ್ ಮಾತನಾಡಿ, ಕ್ಯಾನ್ ಪಿನ್ ಹೋಮ್ಸ್ ಲಿ. ಸಹಯೋಗದೊಂದಿಗೆ ರೂ. ೬೯ ಲಕ್ಷ ನೆರವು ಬಂದಿದೆ. ಇದರಲ್ಲಿ ಬಳಂಜ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಸೇರಿದ್ದು ಇಲ್ಲಿನ ಊರವರ, ಹಳೆ ವಿದ್ಯಾರ್ಥಿಗಳ ಚಿಂತನೆ, ಬೇಡಿಕೆಯಂತೆ ರೂ. ೧೨ ಲಕ್ಷ ನೆರವು ನೀಡಿದ್ದೇವೆ ಎಂದರು.
ರೋಟರಿ ಸಹಾಯಕ ಗವರ್ನರ್ ಎಂವಿ ಭಟ್, ಬೆಳ್ತಂಗಡಿ ರೋಟರಿ ಪೂರ್ವಾಧ್ಯಕ್ಷ ನ್ಯಾಯವಾದಿ ಧನಂಜಯ ರಾವ್, ನಿಯೋಜಿತ ಅಧ್ಯಕ್ಷ ಮಚ್ವಿಮಲೆ ಅನಂತ್ ಭಟ್, ಬೆಳ್ತಂಗಡಿ ರೋಟರಿ ಕಾರ್ಯದರ್ಶಿ ರಕ್ಷಾ ರಾಗ್ನೇಶ್, ಶಾಲಾಹಳೆ ವಿದ್ಯಾರ್ಥಿ, ಕಿರುತೆರೆ ನಿರ್ದೇಶಕ ವಿನು ಬಳಂಜ, ಬಳಂಜ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅದ್ಯಕ್ಷ ನ್ಯಾಯವಾದಿ ಸತೀಶ್ ರೈ ಬಾದಡ್ಕ, ಶಾಲಾಬಿವ್ರದ್ದಿ ಸಮಿತಿಯ ಮಾಜಿ ಅಧ್ಯಕ್ಷರುಗಳಾದ ಪ್ರಮೋದ್ ಕುಮಾರ್ ಜೈನ್, ಅನಂತರಾಜ್ ಜೈನ್ ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯ ವಿಲ್ಫ್ರೆಡ್ ಡಿಸೋಜ ನಿರೂಪಿಸಿ, ಶಿಕ್ಷಕ ಮಲ್ಲಿಕಾರ್ಜುನ ವಂದಿಸಿದರು. ಹಳೆ ವಿದ್ಯಾರ್ಥಿ ಪತ್ರಕರ್ತ ಮನೋಹರ್ ಬಳಂಜ ಪ್ರಾಸ್ತಾವಿಕವಾಗಿ ಮಾತನಾಡಿದರು.
ಗೌರವಾರ್ಪಣೆ
ಕೊಡುಗೆ ನೀಡಲು ಸಹಕರಿಸಿದ ರೋಟರಿ ಇಂದಿರಾನಗರದ ನಿಕಟ ಪೂರ್ವಾಧ್ಯಕ್ಷ ಜಗದೀಶ್ ಮುಗುಳಿ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್, ಕ್ಯಾನ್ ಫಿನ್ ಹೋಮ್ಸ್ ಸಂಸ್ಥೆಯ ಡಿಜಿಎಮ್ ಪ್ರಶಾಂತ್ ಜೋಶಿ, ಶಾಲಾ ಹಳೆವಿದ್ಯಾರ್ಥಿ ಪತ್ರಕರ್ತ ಮನೋಹರ್ ಬಳಂಜ ಅವರನ್ನು ಶಾಲಾ ವತಿಯಿಂದ ಗೌರವಿಸಲಾಯಿತು. ಶಾಲಾ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಹಾಗೂ ವಿದ್ಯಾಭಿಮಾನಿಗಳು ಶಾಲೆಗೆ ಕೊಡುಗೆ ನೀಡಿದ ೪೦೦ ಚಯರ್‌ಗಳನ್ನು ಹಸ್ತಾಂತರಿಸಲಾಯಿತು.