ವೇಣೂರು, ಎ. 16: ಬಜಿರೆ ಸ.ಉ.ಪ್ರಾ. ಶಾಲೆಯಲ್ಲಿ ಆಕರ್ಷಕ ಕುಟೀರವೊಂದು (ಬಯಲು ರಂಗ ಮಂದಿರ) ಸದ್ದಿಲ್ಲದೆ ನಿರ್ಮಾಣ ಆಗಿದೆ.
ಪಚ್ಚೇರಿ ದಿ| ಪ್ರವೀಣ್ ಪೂಜಾರಿ ಸ್ಮರಣಾರ್ಥ ಅವರ ಸಹೋದರ ನವೀನ್ ಪೂಜಾರಿ ಪಚ್ಚೇರಿ ಹಾಗೂ ಮನೆಯವರು ಸುಮಾರು ರೂ. 5 ಲಕ್ಷ ವೆಚ್ಚದಲ್ಲಿ ಕುಟೀರದ ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಪಚ್ಚೇರಿ ದಿ| ಪ್ರವೀಣ್ ಪೂಜಾರಿ ಅವರ ಸವಿನೆನಪೊಂದು ಶಾಶ್ವತವಾಗಿ ಸಮಾಜದಲ್ಲಿ ನೆನಪಿಸುವಂತೆ ಮಾಡಿದೆ.
ಪ್ರವೀಣ್ ಪೂಜಾರಿ ಅವರು ಪೂನಾದಲ್ಲಿ ಖಾಸಗಿ ಕಂಪನೆಯೊಂದರಲ್ಲಿ ಮನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ 2021ರಲ್ಲಿ ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದರು. ತೀರಾ ಸೌಮ್ಯ ಸ್ವಭಾವ ಮತ್ತು ಉತ್ತಮ ಗುಣನಡತೆ ಹೊಂದಿದ್ದ ಅವರ ಸಾವಿನ ಸುದ್ದಿ ತಿಳಿದು ಅವರ ಮನೆಯಲ್ಲಿ ಮಾತ್ರವಲ್ಲದೆ ಇಡೀ ಊರಿನಲ್ಲಿ ದುಖಃದ ಛಾಯೆ ಆಚರಿಸಿತ್ತು. ಹೇಳಿಕೇಳಿ ವೇಣೂರು ಗ್ರಾಮದ ಪಚ್ಚೇರಿ ಕುಟುಂಬ ದಾನ, ಧರ್ಮಕ್ಕೆ ಹಿಂದಿನಿಂದಲೂ ಹೆಸರು ಪಡೆದಿದೆ. ಸಹೋದರನ ಸವಿನೆನಪಿಗೆ ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಬೇಕೆಂದು ಯೋಚಿಸಿದಾಗ ತಾವು ಕಲಿತ ಸರಕಾರಿ ಶಾಲೆಯ ನೆನಪಾಗಿದೆ. ಈ ಬಗ್ಗೆ ಬಜಿರೆ ಶಾಲೆಯ ಮುಖ್ಯಶಿಕ್ಷಕಿ ಕಮಲಾಜಿ ಜೈನ್ ಅವರಲ್ಲಿ ವಿಷಯ ಪ್ರಸ್ತಾಪಿಸಿದಾಗ ಬಯಲು ರಂಗ ಮಂದಿರದ ಅವಶ್ಯಕತೆ ಬಗ್ಗೆ ತಿಳಿಸಿದ್ದರು. ಅದರಂತೆ ನವೀನ್ ಪಚ್ಚೇರಿಯವರು ಕುಟೀರ ನಿರ್ಮಿಸಲು ಮುಂದಾಗಿದ್ದು, ಇದೀಗ ಶೇ. 90ರಷ್ಟು ಕಾಮಗಾರಿ ನಡೆದಿದೆ. ಚುನಾವಣೆಯ ಬಳಿಕ ಉದ್ಘಾಟನೆಯಾಗುವ ನಿರೀಕ್ಷೆ ಇದೆ.
ಬಹು ಉಪಯೋಗಿ ಬಯಲು ರಂಗಮಂದಿರ!
ಬಯಲು ತರಗತಿ ನಡೆಸಲು ಹಾಗೂ ಆಟೋಟ, ಕ್ರೀಡೆಗೆ ವೇದಿಕೆಯಾಗಿ ಬಳಸಲು ಅನುಕೂಲವಾಗಿದೆ. ಅಲ್ಲದೆ ತಾಲೂಕಿನ ಅತೀ ವಿಶಾಲ ಮೈದಾನ ಹೊಂದಿರುವ ಇಲ್ಲಿ ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೂ ವೇದಿಕೆಯಾಗಿ ಬಳಸಲು ಪ್ರಯೋಜನಕಾರಿಯಾಗಲಿದೆ. 30 ಮತ್ತು 40 ಅಡಿ ವಿಸ್ತೀರ್ಣ ಹೊಂದಿರುವ ರಂಗಮಂದಿರಕ್ಕೆ ನೆಲಕ್ಕೆ ಟೈಲ್ಸ್ ಅಳವಡಿಸಲಾಗಿದೆ.
……………………………………………………..
ಶಾಲೆಗೆ ಬಹುದೊಡ್ಡ ಕೊಡುಗೆ
ಬಜಿರೆ ಶಾಲೆಗೆ ಬಯಲು ರಂಗಮಂದಿರ ತೀರಾ ಅಗತ್ಯವಿತ್ತು. ಪಚ್ಚೇರಿ ಕುಟುಂಬಸ್ಥರಿಂದ ಶಾಲೆಯಲ್ಲಿ ನಿರ್ಮಿಸಲಾದ ರಂಗಮಂದಿರದಿಂದ ಶಾಲೆಗೆ ಮತ್ತು ಊರಿಗೆ ದೊಡ್ಡ ಕೊಡುಗೆ ನೀಡಿದಂತಾಗಿದೆ. ಒಬ್ಬ ದಾನಿ ಒಂದು ಸರಕಾರಿ ಶಾಲೆಗೆ ಇಷ್ಟು ದೊಡ್ಡ ಮೊತ್ತದ ಕೊಡುಗೆ ಗ್ರಾಮೀಣ ಭಾಗದ ಬಜಿರೆ ಶಾಲೆಯಲ್ಲೇ ಎನ್ನಬಹುದು. ನವೀನ್ ಪಚ್ಚೇರಿಯವರು ಶಾಲೆಗೆ ನಿರಂತರ ಸಹಕಾರ ನೀಡುತ್ತಿದ್ದರು. ಇದೀಗ ಸಹೋದರನ ಸವಿನೆನಪಿಗೆ ಶಾಲೆಗೆ ಅವಶ್ಯಕತೆ ನೋಡಿ ನೀಡಿದ ಬಹುದೊಡ್ಡ ಕೊಡುಗೆಗೆ ಎಸ್‌ಡಿಎಂಸಿ ಕೃತಜ್ಞತೆ ಸಲ್ಲಿಸುತ್ತದೆ.
– ದಿನೇಶ್ ಪಿ., ಅಧ್ಯಕ್ಷರು ಎಸ್‌ಡಿಎಂಸಿ ಬಜಿರೆ ಶಾಲೆ
ಶಾಶ್ವತ ಕೊಡುಗೆ ನೀಡಿದ ನೆಮ್ಮದಿ ಇದೆ
ಮೃತ ಸಹೋದರನ ನೆನಪಿಗಾಗಿ ಸಮಾಜಕ್ಕೆ ಏನಾದರೊಂದು ಒಂದೆರಡು ಲಕ್ಷದಲ್ಲಿ ಕೊಡುಗೆ ನೀಡಬೇಕೆಂಬ ಯೋಚನೆ ಮೂಡಿತು. ಮಕ್ಕಳಿಗೆ ಪ್ರಯೋಜನ ಆಗುವ ನಿಟ್ಟಿನಲ್ಲಿ ಬಜಿರೆ ಶಾಲೆಯಲ್ಲಿ ಕುಟೀರ ನಿರ್ಮಿಸುವ ಬಗ್ಗೆ ಯೋಚಿಸಿ ಅಲ್ಲಿನ ಮುಖ್ಯಶಿಕ್ಷಕಿಯವರಲ್ಲಿ ಮಾತನಾಡಿದಾಗ ಅವರು ಕುಟೀರ ನಿರ್ಮಾಣದ ಬಗ್ಗೆ ತಿಳಿಸಿದರು. ತಕ್ಷಣ ಕುಟೀರ ನಿರ್ಮಾಣದ ಕಾರ್ಯ ಕೈಗೊಂಡು ಇದೀಗ ಭಾಗಶಃ ಕೆಲಸ ಮುಗಿದಿದೆ. ನಾವು ಶಿಕ್ಷಣ ಪಡೆದ ಶಾಲೆಗೆ ಶಾಶ್ವತ ಕೊಡುಗೆ ನೀಡಿದ ನೆಮ್ಮದಿ ಇದೆ.
– ನವೀನ್ ಪೂಜಾರಿ ಪಚ್ಚೇರಿ