ಮಂಗಳೂರು, ಜೂ. 1: ಹಿಂದುಳಿದ ಸಮುದಾಯದ ಸಮಾಜಮುಖಿ ವೈದ್ಯ, ಶಿಕ್ಷಕ, ಸಂಘಟಕ, ಸಾಹಿತಿ ಹಾಗೂ ಅರಸು ಚಿಂತನೆಯ ಸಮಾಜ ವಿಜ್ಞಾನಿ ಮಂಗಳೂರಿನ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ತೂರು ಅವರ ಹೆಸರನ್ನು ಮಂಗಳೂರು ವಿಶ್ವವಿದ್ಯಾನಿಲಯವು ಪ್ರಸರಾಂಗ ಇಲಾಖೆಯ ಮೂಲಕ ಪ್ರಕಟಿಸಿ ದಾಖಲಿಸಲು ವಿ.ವಿ.ಯ ಸಿಂಡಿಕೇಟ್ ತೀರ್ಮಾನಿಸಿದ್ದು, ಇದು ಹಿಂದುಳಿದ ವರ್ಗದ ಸಮಯದಾಯಕ್ಕೆ ಹೆಮ್ಮೆಯ ವಿಚಾರವಾಗಿದೆ.
ಇತ್ತೀಚಿಗೆ ಜರಗಿದ ಮಂಗಳೂರು ವಿವಿಯ 43ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಸಮಾಜಮುಖಿ ಸಾಧಕರನ್ನು ಗುರುತಿಸಿ ಗೌರವಿಸಲಾಗಿತ್ತು. ಈ ಸಂದರ್ಭ ಡಾ. ಅಣ್ಣಯ್ಯ ಕುಲಾಲ್ ಅವರನ್ನೂ ಗುರುತಿಸಿ ಗೌರವಿಸಲಾಗಿತ್ತು.
ಡಾ. ಅಣ್ಣಯ್ಯ ಕುಲಾಲ್ ಮಂಗಳೂರು ವಿವಿಯಿಂದಲೇ ಬಿಎಸ್‌ಸಿ ಹಾಗೂ ಎಂಬಿಬಿಎಸ್ ಪದವಿ ಪಡೆದು, ಸಮಾಜಮುಖಿ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಗೆ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ, ಪ್ರತಿಷ್ಠಿತ ಡಾ. ಬಿ.ಸಿ. ರಾಯ್ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದರು. ಈಗ ತಾನು ಓದಿದ ಅದೇ ವಿವಿಯ ಸಂಸ್ಥಾಪನಾ ದಿನದ ಗೌರವ ಪಡೆದು, ಯುವ ಪೀಳಿಗೆಗೆ ಮಾದರಿ ಎಂಬ ನೆಲೆಯಲ್ಲಿ ಪ್ರಸಾರಂಗ ಇಲಾಖೆಯಲ್ಲಿ ಸಾಧನೆಯ ಪ್ರಕಟಣಾ ಲೇಖನ ಗೌರವ ಪಡೆದದ್ದು ಅತೀವ್ರ ಸಂತಸ ಮತ್ತು ಹೆಮ್ಮೆ ತಂದಿದೆ ಎಂದು ಡಾ. ಕುಲಾಲ್ ಪ್ರತಿಕ್ರಿಯಿಸಿದ್ದಾರೆ.
ಕುಂದಗನ್ನಡದ ಸಾಧಕರು
ತುಳುನಾಡಿನ ಅವಿಭಜಿತ ದ.ಕ. ಜಿಲ್ಲೆಯ ಬಾರಕೂರು ಹಾಗೂ ಬಸ್ರೂರು ಸೀಮೆಯ ನಡುವೆ ಇರುವ ಕುಂದಗನ್ನಡದ ಗಟ್ಟಿ ಪ್ರದೇಶಗಳಾದ ಕೋಟೇಶ್ವರ, ಕುಂಭಾಸಿ, ಉಳ್ತೂರು, ತೆಕ್ಕಟ್ಟೆ, ಕೋಟಾ, ಸಾಸ್ತಾನ, ಸಾಲಿಗ್ರಾಮ, ವಂಡ್ಸೆ ಮುಂತಾದ ಶೈಕ್ಷಣಿಕ ಸಾಧನಾ ಕ್ಷೇತ್ರಗಳಲ್ಲಿ ಸಾಧನೆಯ ಶಿಖರವೇರಿದವರು ನೂರಾರು ಮಂದಿ. ಅವರೆಲ್ಲರಿಗೂ ಕಳಶಪ್ರಾಯ ಕಡಲತೀರದ ಭಾರ್ಗವ ಕೋಟಾ ಶಿವರಾಮ ಕಾರಂತರು. ಅಂತಹ ಕುಂದಗನ್ನಡದ ಮಣ್ಣಿನಲ್ಲಿ ಹುಟ್ಟಿ ಸಾಧನೆಗೈದ ಡಾ. ಎಂ. ಅಣ್ಣಯ್ಯ ಕುಲಾಲ್ ಉಳ್ಳೂರು ಅವರು ವೃತ್ತಿಯಲ್ಲಿ ವೈದ್ಯನಾಗಿ, ವೈದ್ಯಕೀಯ ಶಿಕ್ಷಕನಾಗಿ, ಪ್ರವೃತ್ತಿಯಲ್ಲಿ ಸಮಾಜ ವಿಜ್ಞಾನಿಯಾಗಿ ಬರಹ, ಭಾಷಣ, ಸಂಘಟನೆ, ಹೋರಾಟಗಳಲ್ಲಿಯೂ ಮುಂಚೂಣಿಯ ನಾಯಕನಾಗಿ ನಾಡು-ನುಡಿ, ನೆಲ-ಜಲಗಳ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ಹೋರಾಟಗಾರನಾಗಿ ಗುರುತಿಸಿಕೊಂಡವರು.
ಯುವ ಸಮುದಾಯಕ್ಕೆ ಮಾದರಿ
ಚಿರಪರಿಚಿತ ವ್ಯಕ್ತಿತ್ವ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬಡತನದ ಕಷ್ಟ ಕಾರ್ಪಣ್ಯಗಳನ್ನು ಮುಗುಳ್ಳಗುತ್ತಲೆ ಮೆಟ್ಟಿನಿಂತು ಅಕ್ಷರ ಕ್ರಾಂತಿಯ ಮೂಲಕ ಉನ್ನತ ಶಿಕ್ಷಣದವರೆಗೂ ಛಲ ಬಿಡದೇ ಸಾಧನೆಯನ್ನು ಮಾಡಿ ಯುವ ಸಮುದಾಯಕ್ಕೆ ಮಾದರಿ ಆದವರು ಡಾ. ಅಣ್ಣಯ್ಯ ಕುಲಾಲ್. ಪ್ರಸ್ತುತ ಜಾತ್ಯತೀತ ಸಮಾಜದಲ್ಲಿ ನೊಂದು ಬೆಂದ ಜನರಿಗೆ ಸ್ಪಂದಿಸುತ್ತ ನಿಸ್ವಾರ್ಥದ ಮಾನವೀಯತೆ ಸೇವೆಯೊಂದಿಗೆ ಪಡೀಲ್‌ನಲ್ಲಿ ಡಾ. ಕುಲಾಲ್ಸ್ ಸೆಕೆಂಡ್ ಒಪಿನಿಯನ್ ಹೆಲ್ತ್ ಸೆಂಟರ್ ನಡೆಸುತ್ತಿದ್ದಾರೆ.
ಪುಟ್ಟಣ್ಣ ಕುಲಾಲ್ ಪ್ರತಿಷ್ಠಾನದ ಆಶ್ರಯದಲ್ಲಿ 2016ರಲ್ಲಿ ಆರಂಭವಾದ ಸರ್ವಜ್ಞ ಸೆಕೆಂಡ್ ಒಪಿನಿಯನ್ ಸೆಂಟರ್ ಬಡ ವರ್ಗದ ಜನತೆಗೆ ಸಾರ್ಥಕ ಸೇವೆಯನ್ನು ಒದಗಿಸುತ್ತಾ ಬಂದಿದೆ. ಮಂಗಳೂರಿನಲ್ಲಿ ನಿಮಗೇನಾದರೂ ಆರೋಗ್ಯ, ಚಿಕಿತ್ಸೆ ಸಂಬಂಧಿಸಿ ಯಾವುದೇ ಮಾಹಿತಿ ಬೇಕಾದರೆ ಇವರನ್ನು ಸಂಪರ್ಕಿಸಬಹುದಾಗಿದೆ. ಮೊ: 9448012028